ಬೆಂಗಳೂರು: ಸರ್ಕಾರಿ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ 2 ಶೇಕಡಾ, ಕ್ರೀಡಾ ಇಲಾಖೆಯಲ್ಲಿ ಕ್ರೀಡಾಪಟುಗಳಿಗೆ 50 ಶೇಕಡಾ ಮೀಸಲಾತಿ ಸೇರಿದಂತೆ ಡಾ.ಆರ್.ಬಾಲಸುಬ್ರಹ್ಮಣ್ಯಂ ಅವರ ನೇತೃತ್ವದ ಸಮಿತಿ ನೀಡಿರುವ ಯುವ ನೀತಿಯನ್ನೂ ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದು ಕ್ರೀಡಾ ಸಚಿವ ನಾರಾಯಣ ಗೌಡ ತಿಳಿಸಿದರು.
ವಿಧಾನಸೌಧದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಗ್ರಾಮೀಣ ಕ್ರೀಡೋತ್ಸವ ಹಾಗೂ ಯೋಗಾಥಾನ್‌ಗೆ ಕಾರ್ಯಕ್ರಮಕ್ಕೆ ಚಾಲನೆ ಹಾಗೂ 2020ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರ್ನಾಟಕದಲ್ಲಿ ಕ್ರೀಡೆಯ ಸಮಗ್ರ ಅಭಿವೃದ್ಧಿಗೆ, ಕ್ರೀಡಾಪಟುಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ನಮ್ಮ ಸರ್ಕಾರ ಕ್ರೀಡೆಗೆ, ಕ್ರೀಡಾಪಟುಗಳಿಗೆ ಸಾಕಷ್ಟು ಉತ್ತೇಜನ ಮತ್ತು ಪ್ರೋತ್ಸಾಹ ನೀಡುತ್ತಿದೆ. ಇಂದು ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡುವ ಮೂಲಕ ಗ್ರಾಮೀಣ ಮಟ್ಟದಿಂದಲೂ ಕ್ರೀಡಾಪಟುಗಳು ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದ್ದೇವೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಸೂಚನೆಯಂತೆ ಗ್ರಾಮ ಪಂಚಾಯತ್ ಮಟ್ಟದಿಂದ ರಾಜ್ಯಮಟ್ಟದವರೆಗೂ ದೇಸಿ ಕ್ರೀಡೆಗಳಾದ ಕುಸ್ತಿ, ಕಬ್ಬಡ್ಡಿ, ಖೋಖೋ ಮತ್ತು ಎತ್ತಿನಬಂಡಿ ಸ್ಪರ್ಧೆ ಆಯೋಜಿಸಲಾಗುತ್ತಿದೆ ಎಂದರು.
ಕ್ರೀಡಾ ಪಟುಗಳಿಗೆ ಪುರಸ್ಕಾರ: 15 ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ, 14 ಕ್ರೀಡಾಪಟುಗಳಿಗೆ ಕ್ರೀಡಾರತ್ನ ಪ್ರಶಸ್ತಿ, 05 ಜನರಿಗೆ ಜೀವಮಾನ ಸಾಧನೆ ಪ್ರಶಸ್ತಿ, 10 ಸಂಸ್ಥೆಗಳಿಗೆ ಕ್ರೀಡಾ ಪೋಷಕ ಪ್ರಶಸ್ತಿ, ಸಹಸ್ರ ಕ್ರೀಡಾ ಪ್ರತಿಭಾ ಪುರಸ್ಕಾರ ಯೋಜನೆಯಡಿ 750 ಯುವ ಕ್ರೀಡಾಪಟುಗಳಿಗೆ ತಲಾ ಒಂದು ಲಕ್ಷ ನಗದು ಪುರಸ್ಕಾರ ನೀಡಿ ಸಿಎಂ ಗೌರವಿಸಿದರು.
ಇದನ್ನೂ ಓದಿ : ಮೈಸೂರು ದಸರಾಗೆ ಬರುವ ಪ್ರವಾಸಿ ವಾಹನಗಳಿಗೆ ತೆರಿಗೆ ವಿನಾಯಿತಿ: ಸಚಿವ ಸೋಮಶೇಖರ್