ಬೆಂಗಳೂರು: ಬಳ್ಳಾರಿಯ ಬಾದನಟ್ಟಿಯಲ್ಲಿ ಕಳೆದ ಹದಿನೈದು ವರ್ಷದಿಂದ ಆಶಾ ಕಾರ್ಯಕರ್ತೆಯಾಗಿ ದುಡಿದ ಭೀಮಕ್ಕ ಕೋವಿಡ್ ಸರ್ವೆ ವೇಳೆ ಕುಸಿದು ಬಿದ್ದಿದ್ದಾರೆ. ಮರುದಿನ ಆಸ್ಪತ್ರೆಗೆ ದಾಖಲಿಸುವಾಗ ಸಾವನ್ನಪ್ಪಿದ್ದಾರೆ. ಸಾವಿನ ಕಾರಣ ಏನು ಎಂದು ರಿಪೋರ್ಟ್ ಇನ್ನೂ ಬಂದಿಲ್ಲ. ಎರಡು ದಿನವಾದ್ರೂ ಮೃತದೇಹ ಆಸ್ಪತ್ರೆಯಲ್ಲೇ ಇದೆ. ಹೀಗಾಗಿ ಭೀಮಕ್ಕ ಅವರಿಗೆ ಐವತ್ತು ಲಕ್ಷ ಪರಿಹಾರ ನೀಡುವಂತೆ ಸಿಐಟಿಯು ಅಧ್ಯಕ್ಷೆ ವರಲಕ್ಷ್ಮಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಲಾಕ್ಡೌನ್ ಸಂಧರ್ಭದಲ್ಲಿಯೂ ಜನರ ಸೇವೆಯನ್ನು ಮಾಡಲು ಆಶಾ ಕಾರ್ಯಕರ್ತೆಯರು ಅತ್ಯಂತ ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿಯಲ್ಲಿ ಹಲವಾರು ಕೊರೊನಾ ಘಟನೆ ನಡೆಯದಿರಲು ಕಾರಣ ಇದೇ ಫ್ರಂಟ್ ಲೈನ್ ಕೆಲಸಗಾರರು. ಬಳ್ಳಾರಿಯಲ್ಲಿ ಆಶಾ ಕಾರ್ಯಕರ್ತೆ ಭೀಮಕ್ಕ ಮೇ 9ರಂದು ಸರ್ವೆಗೆ ಹೋದಾಗ ಕುಸಿದು ಬಿದ್ದಿದ್ದಾರೆ. ಅಂದೇ ಆಸ್ಪತ್ರೆಗೆ ಹೋಗಲು ವಾಹನ ಸಿಕ್ಕಿರಲಿಲ್ಲ. ಮರುದಿನ ರೋಗ ಉಲ್ಬಣಗೊಂಡಾಗ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಮೃತಟ್ಟಿದ್ದಾರೆ. ಇನ್ನೂ ಕೂಡಾ ಅವರ ಮೃತದೇಹವನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಇಡಲಾಗಿದೆ.
ಆಶಾ ವರ್ಕರ್ಸ್ ಕೂಡಾ ಎಂಟು ಗಂಟೆಯ ಕೆಲಸ ಮಾಡಿ ವಿಶ್ರಾಂತಿ ಪಡೆಯುತ್ತಿದ್ದರೆ ಹೀಗಾಗುತ್ತಿರಲಿಲ್ಲ. ಆದ್ರೆ ಹೆಚ್ಚು ಕೆಲಸದಿಂದಾಗಿ ಹೀಗೆ ತೀರಿಕೊಂಡಿದ್ದಾರೆ. ಸರ್ಕಾರ ಇನ್ನೂ ಕೂಡಾ ಇವರ ಪರಿಹಾರಕ್ಕೆ ಮುಂದೆ ಬಂದಿಲ್ಲ. ಪರೀಕ್ಷೆ ನಡೆಸಿ ಸಾವಿನ ಕಾರಣದ ರಿಪೋರ್ಟ್ಗಾಗಿ ಕಾಯಲಾಗ್ತಿದೆ. ಆದ್ರೆ ಇವರಿಗೆ ಕೇಂದ್ರ ಸರ್ಕಾರ ಘೋಷಿಸಿರುವ 50 ಲಕ್ಷ ವಿಮೆಯ ಸೌಲಭ್ಯ ನೀಡಬೇಕು ಎಂದು ವರಲಕ್ಷ್ಮಿ ಒತ್ತಾಯಿಸಿದ್ದಾರೆ. ಅಲ್ಲದೆ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕೂಡಲೇ ಐವತ್ತು ಲಕ್ಷ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.ಇದಷ್ಟೇ ಅಲ್ಲದೆ ಕೋವಿಡ್ ತಡೆಗಟ್ಟಲು ಕೆಲಸ ಮಾಡುತ್ತಿರುವ ಪ್ರತಿಯೊಬ್ಬರಿಗೂ ಪಿಪಿಇ ಕಿಟ್ ಕೊಡಬೇಕು, ಆಗಿಂದಾಗ್ಗೆ ಹೆಲ್ತ್ ಚೆಕಪ್ ನಡೆಸಬೇಕು, ಎನ್ಹೆಚ್ಎಮ್ ಗುತ್ತಿಗೆ, ಸ್ಕೀಂ ನೌಕರರಿಗೆ ಹೆಚ್ಚುವರಿ 25,000 ಪ್ರೋತ್ಸಾಹ ಧನ ಕೊಡಬೇಕು, ಮೊದಲಾದ ಬೇಡಿಕೆ ಇಟ್ಟಿದ್ದಾರೆ.