ಬೆಂಗಳೂರು: ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡವರಿಗೆ 5 ಸಾವಿರ ರೂ. ಹಾಗೂ ಜೀವ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡುವ ಬಗ್ಗೆ ಚರ್ಚಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ವಿವರಿಸಿದೆ. ಪ್ರಾಣಿಗಳ ಜನ ನಿಯಂತ್ರಣ (ನಾಯಿ) ಅಧಿನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ಎಲ್. ರಮೇಶ್ ನಾಯ್ಕ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ವಕೀಲರು, ರಾಜ್ಯ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ 2023ರ ಅ.6ರಂದು ಸಭೆ ನಡೆಸಲಾಯಿತು. ನಾಯಿ ದಾಳಿಗೆ ತುತ್ತಾಗಿ ಗಾಯಗೊಂಡವರಿಗೆ ಐದು ಸಾವಿರ ಹಾಗೂ ಜೀವ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಸಂಬಂಧ ಮತ್ತಷ್ಟು ಚರ್ಚೆ ನಡೆಸುವುದಕ್ಕಾಗಿ ಎರಡನೇ ಸಭೆ ನಡೆಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಕಾಲಾವಕಾಶ ನೀಡಬೇಕು ಎಂದು ಕೋರಿ ಪ್ರಮಾಣ ಪತ್ರ ಸಲ್ಲಿಸಿದರು.
ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ನಾಯಿ ಸೇರಿದಂತೆ ಬೀದಿ ಪ್ರಾಣಿಗಳಿಗೆ ಆಹಾರ ನೀಡುವ ಮತ್ತು ಮಾನವ ಜೊತೆಗಿನ ಅವುಗಳ ಸಂಘರ್ಷ ತಪ್ಪಿಸಲು ರೂಪಿಸಲಾಗಿರುವ ಮಾರ್ಗಸೂಚಿಗಳಿಗೆ ಸರ್ಕಾರ ವ್ಯಾಪಕ ಪ್ರಚಾರ ನೀಡಬೇಕು. ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮುಂದಿನ ನಾಲ್ಕು ವಾರಗಳಲ್ಲಿ ಎರಡನೇ ಸಭೆ ನಡೆಸಬೇಕು. ಸಭೆಯಲ್ಲಿ ಚರ್ಚಿಸಿ ಕೈಗೊಂಡ ಕ್ರಮಗಳ ಕುರಿತು 6 ವಾರದಲ್ಲಿ ಮಾಹಿತಿ ಒದಗಿಸಬೇಕು ಎಂದು ನಿರ್ದೇಶನ ನೀಡಿದ ನ್ಯಾಯಪೀಠ, ವಿಚಾರಣೆ ಮುಂದೂಡಿದೆ.
ಅರಿವು ಮೂಡಿಸಲು ಸೂಚನೆ: ಬೀದಿ ಪ್ರಾಣಿಗಳ ಆಹಾರ ಪೂರೈಕೆ ಸಂಬಂಧ ಮಾರ್ಗಸೂಚಿಗಳನ್ನು ರಚಿಸಲಾಗಿದೆ. ಆದರೆ, ಅವುಗಳ ಕುರಿತು ಸಾರ್ವಜನಿರಿಕರಿಗೆ ಅರಿವು ಇಲ್ಲ. ಮಾರ್ಗಸೂಚಿಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಇಲ್ಲವಾದಲ್ಲಿ ಅವುಗಳು ಪರಿಣಾಮಕಾರಿಯಾಗಿ ಜಾರಿ ಮಾಡಲು ಸಾಧ್ಯವಿಲ್ಲ. ಮಾರ್ಗಸೂಚಿ ಜಾರಿಯಾಗಬೇಕಾದರೆ, ಅವುಗಳ ಬಗ್ಗೆ ರಾಜ್ಯ ಸರ್ಕಾರ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ವ್ಯಾಪಕ ಪ್ರಚಾರ ನೀಡಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಜೊತೆಗೆ, ನಗರದ ಜನದಟ್ಟಣೆ ಪ್ರದೇಶಗಳಲ್ಲಿ ಮತ್ತು ನೋಂದಾಯಿತ ಸಹಕಾರ ಸಂಘಗಳಲ್ಲಿ ಮಾಹಿತಿ ಇಲಾಖೆಯಿಂದ ಮಾರ್ಗಸೂಚಿಗಳ ಕುರಿತು ಅರಿವು ಮೂಡಿಸುವ ಕರಪತ್ರಗಳ ಹಂಚುವ ವಿಧಾನಗಳನ್ನು ಸರ್ಕಾರ ಅನುಸರಿಸಬೇಕು. ಮಾರ್ಗಸೂಚಿಗಳ ಕುರಿತ ಮಾಹಿತಿಯನ್ನು ಒಳಗೊಂಡ ಕಿರುಚಿತ್ರಗಳನ್ನು ಪ್ರಸಾರ ಮಾಡುವಂತೆ ಪ್ರಾದೇಶಿಕ ಟಿವಿ ಮಾಧ್ಯಮ, ಚಿತ್ರಮಂದಿರಗಳ ಮಾಲೀಕರಿಗೆ ಸರ್ಕಾರ ಮನವಿ ಮಾಡಬೇಕು. ಗ್ರಾಮೀಣ ಅಥವಾ ಸ್ಥಳೀಯ ಮಟ್ಟದಲ್ಲಿ ತಮಟೆ ಬಾರಿಸುವಂತಹ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಸೂಚಿಸಬೇಕು. ಈ ಸಲಹೆಗಳಲ್ಲದೇ ಇನ್ನಿತರ ವಿಧಾನಗಳ ಮೂಲಕವೂ ಸರ್ಕಾರ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬಹುದಾಗಿದೆ ಎಂದು ನ್ಯಾಯಪೀಠ ತಿಳಿಸಿತು.
ಬೀದಿ ಪ್ರಾಣಿಗಳ ಜೊತೆಗಿನ ಮಾನವರ ಸಂಘರ್ಷ ಪರಿಹಾರ ಸೂತ್ರದಲ್ಲಿ ನಾಗರಿಕರು ಮತ್ತು ಸ್ಥಳೀಯ ನಿವಾಸಿಗಳು ಪಾಲ್ಗೊಳ್ಳುವುದು ಅಗತ್ಯ. ತಮ್ಮ ಪ್ರದೇಶದಲ್ಲಿನ ಎಲ್ಲ ನಾಯಿಗಳಿಗೆ ಸ್ಥಳೀಯ ಪ್ರಾಧಿಕಾರದಿಂದ ಕ್ರಿಮಿನಾಶಕ ಮತ್ತು ನಿಯಮಿತವಾಗಿ ಲಸಿಕೆಯನ್ನು ನೀಡುವುದನ್ನು ಖಾತರಿಪಡಿಸುವುದು ಸ್ಥಳೀಯ ನಿವಾಸಿಗಳ ಜವಾಬ್ದಾರಿಯಾಗಿದೆ. ಸಮುದಾಯದ ನಾಯಿಗಳಿಗೆ ಆಹಾರ ನೀಡುವವರ (ಫೀಡರ್‌ಗಳ) ಯಾವುದೇ ಕಾರ್ಯಕ್ಕೆ ಸಂಬಂಧಿಸಿದಂತೆ ಯಾರಿಗಾದರೂ ಕುಂದುಕೊರತೆಯಿದ್ದರೆ, ಅವರು ಪ್ರಾಣಿ ಕಲ್ಯಾಣ ಸಮಿತಿ ಮೂಲಕ ಸಂವಾದ ಮತ್ತು ಚರ್ಚೆಯಲ್ಲಿ ತೊಡಗಬೇಕು. ಇದು ಪರಿಹಾರವಾಗದಿದ್ದರೆ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು (ಆರ್‌ಡಬ್ಲ್ಯೂಎ) ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟುವ ಜಿಲ್ಲಾ ಸೊಸೈಟಿಯ ಗಮನಕ್ಕೆ ತರಬಹುದು (ಡಿಎಸ್‌ಪಿಸಿಎ) ಎಂದು ಮಾರ್ಗಸೂಚಿ ಹೇಳುತ್ತದೆ ಎಂದು ನ್ಯಾಯಪೀಠವು ಆದೇಶದಲ್ಲಿ ಉಲ್ಲೇಖಿಸಿತು.
ಇದನ್ನೂ ಓದಿ: ಹುಣಸೋಡು ಸ್ಫೋಟ ಪ್ರಕರಣ: ಸಿಇಎನ್ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿ ರದ್ದುಪಡಿಸಿದ ಹೈಕೋರ್ಟ್