ಬೆಂಗಳೂರು: ರಾಜ್ಯದಲ್ಲಿನ ಸಿಬಿಎಸ್ಇ ಹಾಗೂ ಐಸಿಎಸ್ಇ ಪಠ್ಯಕ್ರಮ ಇರುವ ಶಾಲೆಗಳಲ್ಲಿಯೂ ಕಡ್ಡಾಯವಾಗಿ ಕನ್ನಡ ಕಲಿಸಬೇಕು ಎಂಬ ಸರ್ಕಾರದ ಆದೇಶ ಪ್ರಶ್ನಿಸಿ 4ನೇ ತರಗತಿ ವಿದ್ಯಾರ್ಥಿಯೋರ್ವ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಈ ಸಂಬಂಧ ಪ್ರತಿಕ್ರಿಯೆ ಕೇಳಿ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಐಸಿಎಸ್ಇ ಹಾಗೂ ಸಿಬಿಎಸ್ಇ ಪಠ್ಯಕ್ರಮ ಹೊಂದಿರುವ ಶಾಲೆಗಳಲ್ಲಿ ಪ್ರಥಮ ಭಾಷೆ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕು ಎಂಬ ಹಿನ್ನೆಲೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕನ್ನಡ ಭಾಷೆ ಕಲಿಕೆ ಕಾಯ್ದೆ-2018ನ್ನು ಪ್ರಶ್ನಿಸಿ ವಿದ್ಯಾರ್ಥಿ ಕೀರ್ತನ್ ಸುರೇಶ್ ಎಂಬಾತ ಅರ್ಜಿ ಸಲ್ಲಿಸಿದ್ದಾನೆ.
ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠ, ಕೆಲಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿತು.
ಅರ್ಜಿದಾರರ ಕೋರಿಕೆ ಏನು..?
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್ಇ) ಮತ್ತು ಇಂಡಿಯನ್ ಸರ್ಟಿಫಿಕೆಟ್ ಆಫ್ ಸೆಕೆಂಡರಿ ಎಜುಕೇಷನ್ (ಐಸಿಎಸ್ಇ) ಪಠ್ಯಕ್ರಮವಿರುವ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬೋಧಿಸಲು ರೂಪಿಸಿರುವ 2018ರ ಕನ್ನಡ ಭಾಷೆ ಕಲಿಕೆ ಕಾಯ್ದೆ ಅಸಂವಿಧಾನಿಕ ಹಾಗೂ ಅಕ್ರಮವಾದುದು. ಸಿಬಿಎಸ್ಇ, ಐಸಿಎಸ್ಇ ಪಠ್ಯಕ್ರಮ ಹೊಂದಿರುವ ಶಾಲೆಗಳಲ್ಲಿ ಈ ನಿಯಮವನ್ನು ಅಳವಡಿಸುವುದು ಸರಿಯಲ್ಲ. ಕಾಯ್ದೆಯು ಸಂವಿಧಾನದ ವಿಧಿ 14, 19(1)(ಜಿ) ಹಾಗೂ 301 ನ್ನು ಉಲ್ಲಂಘಿಸುತ್ತದೆ.
ಉದ್ಯೋಗದಲ್ಲಿರುವ ಜನರು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ವರ್ಗಾವಣೆಯಾದಾಗ ತಮ್ಮ ಮಕ್ಕಳನ್ನು ಸಿಬಿಎಸ್ಇ ಅಥವಾ ಐಸಿಎಸ್ಇ ಪಠ್ಯಕ್ರಮ ಹೊಂದಿರುವ ಶಾಲೆಗಳಿಗೆ ಸೇರಿಸಲು ಆದ್ಯತೆ ನೀಡುತ್ತಾರೆ. ವರ್ಗಾವಣೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದೆಂದು ಈ ಶಾಲೆಗಳಿಗೆ ಸೇರಿಸುತ್ತಾರೆ.
ಆದರೆ, ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಡ್ಡಾಯಗೊಳಿಸಿದರೆ ಇಂತಹ ಮಕ್ಕಳಿಗೆ ತೊಂದರೆಯಾಗುತ್ತದೆ. ಹಾಗೆಯೇ ಮುಂದಿನ ತರಗತಿಗೆ ಬೇರೆ ರಾಜ್ಯಕ್ಕೆ ಹೋದಲ್ಲಿ ಅಲ್ಲಿನ ಪಠ್ಯದಲ್ಲಿ ಕನ್ನಡ ಭಾಷೆ ಇರುವುದಿಲ್ಲ. ಇದರಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಶಾಲೆಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿರುವ ಕ್ರಮವನ್ನು ಅಸಿಂಧುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ: ರಾಜ್ಯ ಹೈಕೋರ್ಟ್ನ 10 ನ್ಯಾಯಮೂರ್ತಿಗಳ ಸೇವೆ ಖಾಯಂಗೊಳಿಸಿ ಕೇಂದ್ರದ ಆದೇಶ