ಬೆಂಗಳೂರು : ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ನಾಲ್ಕನೇ ಅಭ್ಯರ್ಥಿ ಆಯ್ಕೆ ಕಗ್ಗಂಟು ಮುಂದುವರೆದಿದ್ದು, ಬಹುತೇಕ ನಾಳೆ ರಾತ್ರಿ ವೇಳೆಗೆ ಇದಕ್ಕೆ ಸ್ಪಷ್ಟ ಸ್ವರೂಪ ದೊರೆಯುವ ಸಾಧ್ಯತೆ ಇದೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹೊಂದಾಣಿಕೆಯಾಗದಿದ್ದರೆ ಬಿಜೆಪಿ ಅಭ್ಯರ್ಥಿ ಗೆಲುವು ನಿರಾಯಾಸವಾಗಲಿದೆ. ಪಕ್ಷೇತರರು ಸೇರಿದಂತೆ 122 ಶಾಸಕರನ್ನು ಹೊಂದಿರುವ ಬಿಜೆಪಿಗೆ ಯಾವುದೇ ಗೊಂದಲವಿಲ್ಲದೆ ಎರಡು ರಾಜ್ಯಸಭಾ ಸ್ಥಾನಗಳನ್ನು ಗೆಲ್ಲಬಹುದು. ತನ್ನ ಲೆಕ್ಕಾಚಾರಗಳು ಕಾರ್ಯರೂಪಕ್ಕೆ ಬರುತ್ತವೆ ಎಂಬ ನಿರೀಕ್ಷೆಯಲ್ಲಿ ಮೂರನೇ ಸ್ಥಾನದ ಮೇಲೆ ಬಿಜೆಪಿ ಕಣ್ಣಿಟ್ಟಿದೆ.
ವಿಧಾನಸಭೆಯ ಒಟ್ಟು 225 ಶಾಸಕರ ಪೈಕಿ ಬಿಜೆಪಿ 119 ಶಾಸಕರು, ಬಿ.ಎಸ್.ಪಿ ಶಾಸಕ ಮಹೇಶ್, ಇಬ್ಬರು ಪಕ್ಷೇತರರು ಸೇರಿದರೆ ಸಂಖ್ಯಾಬಲ 122 ಕ್ಕೆ ಏರಿಕೆಯಾಗಲಿದೆ. ಸ್ಪೀಕರ್ ಕೂಡ ಇದ್ದಾರೆ. ಒಬ್ಬರು ಪಕ್ಷೇತರರು ಸೇರಿ ಕಾಂಗ್ರೆಸ್ 70 ಮತ್ತು ಜೆಡಿಎಸ್ 32 ಶಾಸಕರನ್ನು ಹೊಂದಿದೆ.
ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ನಟ-ರಾಜಕಾರಣಿ ಜಗೇಶ್ ಆಯ್ಕೆಗೆ ಯಾವುದೇ ಸಮಸ್ಯೆ ಇಲ್ಲ. ಹಿರಿಯ ನಾಯಕ ಲೆಹರ್ ಸಿಂಗ್ ಸಿರೋಯಾ ಗೆಲುವು ಕಾಂಗ್ರೆಸ್ – ಜೆಡಿಎಸ್ ಮೈತ್ರಿಯನ್ನು ಅವಲಂಬಿಸಿದೆ.
ಬಿಜೆಪಿ ಹೆಚ್ಚುವರಿಯಾಗಿ 32 ಶಾಸಕರ ಸಂಖ‍್ಯಾಬಲ ಹೊಂದಿದೆ. ಹೀಗಾಗಿ ಎರಡನೇ ಪ್ರಾಶಸ್ತ್ಯದ ಮತಗಳಿಗೆ ಬಿಜೆಪಿ ಒತ್ತು ನೀಡುತ್ತಿದೆ. ವಾಸ್ತವವಾಗಿ, ಎಲ್ಲಾ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸಿಕೊಳ್ಳಲು ಈ ಗರಿಷ್ಠ ಸಂಖ್ಯೆಯ ಮತಗಳ ಮೇಲೆ ಕಣ್ಣಿಟ್ಟಿವೆ. ಮೂರನೇ ಅಭ್ಯರ್ಥಿ ಗೆಲುವಿಗೆ ಮೈತ್ರಿ ಮಹತ್ವದ ಪಾತ್ರ ವಹಿಸಲಿದೆ. ಹೆಚ್ಚಿನ ಪ್ರಮಾಣದಲ್ಲಿ ಆತ್ಮಸಾಕ್ಷಿ ಮತಗಳು ದೊರೆತರೆ ಲೆಕ್ಕಾಚಾರ ತಲೆಕೆಳಗಾಗಬಹುದು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾದರೆ ಮೂರನೇ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಕಡಿಮೆ. ಆದರೆ ಕೊನೆಯ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಕಾರಣಕ್ಕೆ ಪಕ್ಷ ಯಾವುದೇ ಗುಟ್ಟು ಬಿಟ್ಟುಕೊಡುತ್ತಿಲ್ಲ.
ಬಿಜೆಪಿ ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ತಂತ್ರ ಹೆಣೆದಿದ್ದರೆ, ನಾಳೆ ನಡೆಯಲಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಶಾಸಕಾಂಗ ಪಕ್ಷದ ಸಭೆಗಳಲ್ಲಿ ಪ್ರತಿತಂತ್ರ ಯಾವ ರೀತಿ ಹೆಣೆಯುತ್ತವೆ ಎಂಬುದು ಕಾದುನೋಡಬೇಕಿದೆ.
ಓದಿ : ಬಿಟಿಎಸ್ ಬೆಳ್ಳಿ ಹಬ್ಬ ಉದ್ಘಾಟನೆಗೆ ಪ್ರಧಾನಿಗೆ ಆಹ್ವಾನ: ಸಚಿವ ಅಶ್ವತ್ಥ್ ನಾರಾಯಣ