ಬೆಂಗಳೂರು: ನಗರದಲ್ಲಿ ನಿನ್ನೆ 47 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಕೊರೊನಾ ಮಹಾಮಾರಿ ಆರಂಭದ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 772ಕ್ಕೆ ಏರಿಕೆಯಾಗಿದೆ. ಇದರಲ್ಲಿ ದೆಹಲಿಯಿಂದ ವಾಪಸಾದ ಹನ್ನೊಂದು ತಿಂಗಳ ಮಗುವಿಗೂ ಕೊರೊನಾ ಅಂಟಿಕೊಂಡಿದೆ.
ನಿನ್ನೆ 32 ಮಂದಿ ಕೊರೊನಾ ಮುಕ್ತರಾಗಿದ್ದು, ಈವರೆಗೆ ಒಟ್ಟು 361 ಮಂದಿ ಗುಣಮುಖರಾಗಿದ್ದಾರೆ. 372 ಮಂದಿಗೆ ಚಿಕಿತ್ಸೆ ನಡೆಯುತ್ತಿದೆ. ನಿನ್ನೆಯ ದಿನ ಐವರು ಕೋವಿಡ್ಗೆ ಬಲಿಯಾಗಿದ್ದು, ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟಿನ್ನಲ್ಲಿ ವರದಿ ಮಾಡಿದೆ. ಒಟ್ಟು ಸಾವನ್ನಪ್ಪಿದವರ ಸಂಖ್ಯೆ 38 ಕ್ಕೆ ಏರಿಕೆಯಾಗಿದೆ.
ಮೃತಪಟ್ಟವರಲ್ಲಿ 72 ವರ್ಷದ ವ್ಯಕ್ತಿ, 60 ವರ್ಷದ ವ್ಯಕ್ತಿ ಹಾಗೂ 65, 85, 86 ವರ್ಷದ ಮೂವರು ಮಹಿಳೆಯರು ಸೇರಿದ್ದಾರೆ. ಇದರಲ್ಲಿ ಮೂವರಿಗೆ ಇತರ ಕಾಯಿಲೆಯ ಹಿನ್ನೆಲೆಯೂ ಇದ್ದು ಕೊರೊನಾ ಕೂಡಾ ಬಾಧಿಸಿದ್ದರಿಂದ ಮೃತಪಟ್ಟಿದ್ದಾರೆ.
47 ಪ್ರಕರಣಗಳ ಪೈಕಿ 13 ಜನರಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡಿದೆ. ಆರು ಮಂದಿಗೆ ಪ್ರಯಾಣದ ಇತಿಹಾಸ ಇದೆ. ಐವರು ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದಂತೆ ಹೊಸ ಪ್ರದೇಶಗಳಿಂದ ಸೋಂಕಿನ ಲಕ್ಷಣ ಇರುವುದು ದೃಢಪಟ್ಟಿದೆ.