ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಕಡಿತ ಮಾಡಿರುವ ಸರ್ಕಾರಕ್ಕೆ ಇದೀಗ ಮತ್ತೊಂದು ಗೊಂದಲ ಶುರುವಾಗಿದೆ.
ಒಂದು ಸಮಸ್ಯೆ ಬಗೆಹರಿಯಿತು ಎನ್ನುವಾಗಲೇ ಇದೀಗ ಕಲ್ಯಾಣ ಕರ್ನಾಟಕ ಭಾಗದ 4,500 ಶಾಲೆಗಳು ಬಂದ್ ಆಗುವ ಸಾಧ್ಯತೆ ಇದ್ದು, ಇದರಿಂದ 4.5 ಲಕ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಇದಕ್ಕೆ ಸುಮಾರು 7 ವರ್ಷಗಳಿಂದ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟ ಹಣ ಬಳಸಿಕೊಳ್ಳದೆ ಇರುವುದೇ ಕಾರಣ ಎನ್ನಲಾಗುತ್ತಿದೆ.
ಕಳೆದ 7 ವರ್ಷಗಳಿಂದ ಅನುದಾನವನ್ನೇ ನಂಬಿದ್ದ ಸುಮಾರು 4,500 ಶಾಲೆಗಳ ಶೈಕ್ಷಣಿಕ ಅಭಿವೃದ್ಧಿ ಕುಂಠಿತವಾಗಿದೆ. ಕಲಬುರಗಿ, ರಾಯಚೂರು, ಬೀದರ್, ಯಾದಗಿರಿ ಹಾಗೂ ಬಳ್ಳಾರಿ ಸೇರಿದಂತೆ ಈ ಭಾಗದ ಸಾಕಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿರುವ ಮಾಹಿತಿ ಶಿಕ್ಷಣ ಇಲಾಖೆ ಬಳಿ ಇದೆ. ಅಲ್ಲದೆ ಬಾಲಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ, ದುಶ್ಚಟಗಳಿಗೆ ಮಕ್ಕಳು ಒಳಗಾಗುತ್ತಿದ್ದಾರೆ.
ಓದಿ: ಕಾನ್ಸ್ಟೇಬಲ್ ಪರೀಕ್ಷೆ ವಯೋಮಿತಿ ಹೆಚ್ಚಿಸುವಂತೆ ಕೋರಿ ಗೃಹ ಸಚಿವರಿಗೆ ರಕ್ತದಲ್ಲಿ ಪತ್ರ
ಕನ್ನಡ ಮಾಧ್ಯಮದಲ್ಲಿರುವ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು. 371 ಜೆ ಅಡಿಯಲ್ಲಿರುವ ಶೈಕ್ಷಣಿಕ ಅಭಿವೃದ್ಧಿಗೆ ಅನುದಾನ ಬಳಸಿಕೊಳ್ಳಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸಮಿತಿಯ ಬೋರ್ಡ್ಗೆ ಅಧ್ಯಕ್ಷರನ್ನು ನೇಮಕ ಮಾಡಬೇಕು. ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ನಡುವೆ ತಾರತಮ್ಯ ಮಾಡಬಾರದು ಎಂದು ಸರ್ಕಾರಕ್ಕೆ ಕಲ್ಯಾಣ ಕರ್ನಾಟಕದ ಖಾಸಗಿ ಶಾಲೆಗಳ ಒಕ್ಕೂಟ ಹಾಗೂ ರುಪ್ಸಾ ಬೇಡಿಕೆಯನ್ನು ಇಟ್ಟಿದೆ.
ಬೇಡಿಕೆ ಈಡೇರಿಸಲು ಸರ್ಕಾರಕ್ಕೆ 10 ದಿನಗಳ ಗಡುವು ನೀಡಲಾಗುತ್ತಿದ್ದು, ಈಡೇರದೆ ಇದ್ದರೆ ಶಾಲೆಗಳನ್ನು ಮುಚ್ಚುವ ನಿರ್ಧಾರಕ್ಕೆ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳು ಬಂದಿವೆ ಎನ್ನಲಾಗುತ್ತಿದೆ.