ಬೆಂಗಳೂರು: ರಾಜ್ಯದಲ್ಲಿ ಆಲಿಕಲ್ಲು ಮಳೆಯಿಂದಾಗಿ ಹಾನಿಯಾಗಿರುವ ರೈತರ ಬೆಳೆಗಳಿಗೆ ಒಟ್ಟು 45 ಕೋಟಿ ರೂ.ಗಳ ಪರಿಹಾರವನ್ನು ವಿಪತ್ತು ನಿರ್ವಹಣಾ ನಿಧಿಯಿಂದ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರಾಜ್ಯದ ಕೆಲ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಿಂದ ರೈತರ ಬೆಳೆ ನಾಶವಾಗಿದೆ. ವಿಪತ್ತು ನಿರ್ವಹಣಾ ನಿಧಿಯಿಂದ ರೈತರಿಗೆ ಪರಿಹಾರ ಕೊಡಲು ಕೊಪ್ಪಳ ಜಿಲ್ಲೆಗೆ 34.45 ಕೋಟಿ ಹಣ ಬಿಡುಗಡೆ ಮಾಡುತ್ತಿದ್ದು, ಯಾದಗಿರಿಗೆ 2.59 ಕೋಟಿ, ರಾಯಚೂರು 7.41 ಕೋಟಿ, ಬಳ್ಳಾರಿ, ಕಲಬುರಗಿ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಿಗೂ ಪರಿಹಾರದ ಹಣ ಬಿಡುಗಡೆ ಮಾಡಲಾಗುವುದು. ಭತ್ತ ಸೇರಿ ರೈತರ ಬೆಳೆ ಹಾನಿಗೆ ಪರಿಹಾರವಾಗಿ ಒಟ್ಟು 45.45 ಕೋಟಿ ಹಣ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಈಗಾಗಲೇ ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿಯ ಕುರಿತು ವರದಿ ತರಿಸಿಕೊಳ್ಳಲಾಗಿದೆ. ಅದರಂತೆ ರೈತರಿಗೆ ಪರಿಹಾರದ ಹಣ ವಿತರಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದರು.