ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಲ್ಲಿ ಅನುಷ್ಠಾನಗೊಂಡ ಮಹಿಳೆಯರ ಉಚಿತ ಬಸ್ ಪ್ರಯಾಣದ 'ಶಕ್ತಿ ಯೋಜನೆ'ಯಡಿಯಲ್ಲಿ 43 ಕೋಟಿಗಿಂತ ಹೆಚ್ಚು ಮಹಿಳೆಯರು ಉಚಿತ ಪ್ರಯಾಣಿಸಿ 1,000 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸಿದ್ದಾರೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತಿಳಿಸಿದೆ. ಯೋಜನೆ ಜಾರಿಯಾದಾಗಿನಿಂದ ಈವರೆಗೂ 4 ಸಾರಿಗೆ ನಿಗಮಗಳಲ್ಲಿ 43,61,49,219 ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿ 1013.94 ಕೋಟಿ ಮೊತ್ತದ ಟಿಕೆಟ್ ಪಡೆದಿದ್ದಾರೆ ಎಂದು ಮಾಹಿತಿ ಒದಗಿಸಿದೆ.
ಕೆಎಸ್‌ಆರ್‌ಟಿಸಿಯಲ್ಲಿ 13,26,08,022 ಮಹಿಳೆಯರು ಪ್ರಯಾಣಿಸಿದ್ದು, 384,17,94,855 ರೂ. ಮೊತ್ತದ ಟಿಕೆಟ್ ಪಡೆದಿದ್ದಾರೆ. ಬಿಎಂಟಿಸಿಯಲ್ಲಿ 14,43,67,198 ಮಹಿಳೆಯರು ಪ್ರಯಾಣಿಸಿದ್ದು, 184,26,15,492 ಟಿಕೆಟ್ ವಹಿವಾಟು ನಡೆಸಿದ್ದಾರೆ. ಉಳಿದಂತೆ, ವಾಯುವ್ಯ ಕರ್ನಾಟಕ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ ಕ್ರಮವಾಗಿ 10,07,26,888 ಹಾಗೂ 5,84,47,111 ಮಹಿಳೆಯರು ಪ್ರಯಾಣಿಸಿದ್ದು, 252,98,78,590 ಹಾಗೂ 192,51,36,803 ರೂ. ಮೊತ್ತದ ಟಿಕೆಟ್ ನೀಡಲಾಗಿದೆ.
ಜುಲೈ ತಿಂಗಳಿನಲ್ಲಿ 19 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಸುಮಾರು 450 ಕೋಟಿ ರೂ. ಗೂ ಹೆಚ್ಚು ಟಿಕೆಟ್ ಖರ್ಚಾಗಿತ್ತು. ಯೋಜನೆ ಜಾರಿಯಾದ ಜೂನ್ ತಿಂಗಳಿನಲ್ಲಿ 10 ಕೋಟಿ ಮಹಿಳೆಯರು ಪ್ರಯಾಣಿಸಿದ್ದು 250 ಕೋಟಿ ವಹಿವಾಟು ನಡೆದಿದೆ.
ಉಚಿತ ಬಸ್ ಪ್ರಯಾಣದ ಯೋಜನೆಯಿಂದ ಸರ್ಕಾರಿ ಬಸ್‍ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ನಷ್ಟದಲ್ಲಿದ್ದ ಸಂಸ್ಥೆಗಳಿಗೆ ಲಾಭವಾಗಿದೆ. ಆದರೆ ಸರ್ಕಾರದ ಬೊಕ್ಕಸಕ್ಕೆ ಬಾರಿ ಪ್ರಮಾಣದಲ್ಲಿ ಹೊರೆಯಾಗುತ್ತಿದೆ. 2023-24ರ ಬಜೆಟ್‍ನಲ್ಲಿ ಯೋಜನೆಗೆ ಸುಮಾರು 4 ಸಾವಿರ ಕೋಟಿ ರೂ ಮೀಸಲಿಡಲಾಗಿದ್ದು, ಜನರಿಂದ ಭಾರಿ ಪ್ರಮಾಣದ ಪ್ರತಿಕ್ರಿಯೆಯಿಂದಾಗಿ ಅನುದಾನದ ಪ್ರಮಾಣ ದುಪ್ಪಟ್ಟಾಗುವ ಲಕ್ಷಣ ಕಾಣುತ್ತಿದೆ.
ಶಕ್ತಿಯೋಜನೆ ಸ್ಥಗಿತ ಆಗಲ್ಲ- ಸಿಎಂ ಸಿದ್ದರಾಮಯ್ಯ : ರಾಜ್ಯ ಸರ್ಕಾರದ ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈ ಬಗ್ಗೆ ಎಕ್ಸ್ನಲ್ಲಿ (ಹಿಂದಿನ ಟ್ಟಿಟರ್) ಮಾಹಿತಿ ನೀಡಿರುವ ಅವರು, ಮೊದಲು ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ಅಪಪ್ರಚಾರ ಮಾಡಿದರು. ಈಗ ಈ ಯೋಜನೆಗಳು ಹೆಚ್ಚು ಕಾಲ ಚಾಲನೆಯಲ್ಲಿ ಇರುವುದಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇಂಥ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ, ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರ. ಇದಕ್ಕೆ ನಾನೇ ಗ್ಯಾರಂಟಿ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ : Shakti Yojana: ಪ್ರತಿದಿನ ಶೇ.1ರಷ್ಟು ಶಕ್ತಿ ಯೋಜನೆ ದುರ್ಬಳಕೆ- ಸಚಿವ ರಾಮಲಿಂಗಾ ರೆಡ್ಡಿ