ಬೆಂಗಳೂರು: ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ 16 ಜಿಲ್ಲೆಗಳ 43 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿದೆ.
ಈ ಸಂಬಂಧ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬೆಳೆ ಹಾನಿ, ಮನೆ ಹಾನಿ ಹಾಗೂ ಮೂಲಭೂತ ಸೌಕರ್ಯ ಹಾನಿ ಹಿನ್ನೆಲೆ 23 ಜಿಲ್ಲೆಗಳ 130 ತಾಲೂಕುಗಳನ್ನು ಈಗಾಗಲೇ ಪ್ರವಾಹ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿತ್ತು. ಇದೀಗ ಸೆಪ್ಟೆಂಬರ್ ತಿಂಗಳಲ್ಲೂ ಮಳೆಯ ಆರ್ಭಟ ಹೆಚ್ಚಿದ್ದು, ಮತ್ತೆ 16 ಜಿಲ್ಲೆಗಳ 43 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕು ಎಂದು ಘೋಷಿಸಲಾಗಿದೆ.
ಅದರಂತೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ, ಹಾವೇರಿ ಜಿಲ್ಲೆಯ ಬ್ಯಾಡಗಿ, ಸವಣೂರು ತಾಲೂಕುಗಳನ್ನು ಪ್ರವಾಹ ಪೀಡಿತವೆಂದು ಘೋಷಿಸಲಾಗಿದೆ. ಇನ್ನು ವಿಜಯಪುರ ಜಿಲ್ಲೆಯಲ್ಲಿ ವಿಜಯಪುರ, ಬಸವನಬಾಗೇವಾಡಿ, ತಾಳಿಕೋಟೆ, ಸಿಂಧಗಿ, ಇಂಡಿ, ದೇವರ ಹಿಪ್ಪರಗಿ ತಾಲೂಕು, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಜಗಳೂರು ತಾಲೂಕುಗಳು ಪ್ರವಾಹಪೀಡಿತವಾಗಿವೆ.
ಗದಗ ಜಿಲ್ಲೆಯ ಗಜೇಂದ್ರಗಡ, ಗದಗ, ಲಕ್ಷ್ಮೇಶ್ವರ ತಾಲೂಕು, ರಾಯಚೂರು ಜಿಲ್ಲೆಯ ಮಸ್ಕಿ, ಸಿರವಾರ ತಾಲೂಕು, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಅಜ್ಜಂಪುರ ತಾಲೂಕು, ಕಲಬುರಗಿ ಜಿಲ್ಲೆಯ ಚಿಂಚೋಳಿ, ಯಡ್ರಾವಿ ತಾಲೂಕು, ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ, ನಂಜನಗೂಡು, ಸರಗೂರು ತಾಲೂಕು, ಉ.ಕನ್ನಡ ಜಿಲ್ಲೆಯ ದಾಂಡೇಲಿ, ಹಳಿಯಾಳ ತಾಲೂಕನ್ನು ಪ್ರವಾಹ ಪೀಡಿತವೆಂದು ಘೋಷಿಸಲಾಗಿದೆ.
ಅದೇ ರೀತಿ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು, ಹೊಳಲ್ಕೆರೆ, ಹೊಸದುರ್ಗ ತಾಲೂಕು, ಬಳ್ಳಾರಿ ಜಿಲ್ಲೆಯ ಸಂಡೂರು, ಬಳ್ಳಾರಿ, ಕೂಡ್ಲಗಿ ತಾಲೂಕು, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು, ಕೊಪ್ಪಳ ಜಿಲ್ಲೆಯ ಕನಕಗಿರಿ, ಕುಷ್ಟಗಿ, ಯಲಬುರ್ಗ, ಕುಕನೂರು ತಾಲೂಕು, ಬೀದರ್ ಜಿಲ್ಲೆಯ ಕಮಲಾನಗರ, ಚಿಟಗುಪ್ಪ, ಹುಲಸೂರು ತಾಲೂಕು ಹಾಗೂ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕನ್ನು ಪ್ರವಾಹ ಪೀಡಿತವೆಂದು ಘೋಷಣೆ ಮಾಡಲಾಗಿದೆ.