ಬೆಂಗಳೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಹವಾ ಜೋರಾಗಿದ್ದ ಹಿನ್ನೆಲೆ ಸಿಸಿಬಿ ಪೊಲೀಸರು ವಿಶೇಷ ತಂಡ ರಚನೆ ಮಾಡಿ ಮ್ಯಾಚ್ ವೇಳೆ ವಿವಿಧ ಬೆಟ್ಟಿಂಗ್ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದರು.
ಐಪಿಎಲ್ನ ಈ ಸೀಸನ್ನಲ್ಲಿ ಒಟ್ಟು 42 ಆರೋಪಿಗಳನ್ನು ಬಂಧಿಸಲಾಗಿದ್ದು, 1 ಕೋಟಿ 54 ಲಕ್ಷ ರೂಪಾಯಿ ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ಸಂಬಂಧ ವಿವಿಧ ಠಾಣೆಗಳಲ್ಲಿ 25 ಬೆಟ್ಟಿಂಗ್ ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳ ಪೈಕಿ ಸದ್ಯ 42 ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ.
ಸುಮಾರು ಎರಡು ತಿಂಗಳವರೆಗೂ ನಡೆದ ಐಪಿಎಲ್ ಪಂದ್ಯಾವಳಿಯ ವೇಳೆ ವಿವಿಧೆಡೆ ಬೆಟ್ಟಿಂಗ್ ಸಾಮಾನ್ಯವಾಗಿದ್ದನ್ನು ಗಮನಿಸಿದ್ದ ಸಿಸಿಬಿ ತಂಡ, ದಂಧೆಯನ್ನು ಹತ್ತಿಕ್ಕಲು ವಿಶೇಷ ತಂಡವನ್ನು ರಚಿಸಿತು. ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ರಚಿಸಲಾದ ವಿಶೇಷ ತಂಡವು ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್ ಗಳನ್ನೊಳಗೊಂಡಿತ್ತು. ಅಷ್ಟೇ ಅಲ್ಲದೆ, ಅಗತ್ಯ ಬಿದ್ದಾಗ ಬಾತ್ಮೀದಾರರ ಮೂಲಕವೂ ಮಾಹಿತಿ ಕಲೆಹಾಕಲಾಗಿತ್ತು.
ಬಹುತೇಕ ಮಂದಿ ಆನ್ಲೈನ್ ಮುಖಾಂತರ ಬೆಟ್ಟಿಂಗ್ ಆಡುವ ಕಾರಣ ಸಿಸಿಬಿ ಪೊಲೀಸರು ಸೈಬರ್ ವಿಂಗ್ ಮುಖಾಂತರ ಆಪರೇಟ್ ಮಾಡುವ ನಿರ್ಧಾರ ಕೈಗೊಂಡರು.
ಹೇಗೆ ನಡೆಯುತ್ತದೆ ಆನ್ಲೈನ್ ಬೆಟ್ಟಿಂಗ್:
ಸಾಮಾನ್ಯವಾಗಿ ಬೆಟ್ಟಿಂಗ್ ಆಡುವಾಗ ಯಾವ ತಂಡ ಗೆಲ್ಲುತ್ತದೆ ಎಂದು ಬಾಜಿ ಕಟ್ಟುತ್ತಾರೆ. ಅಲ್ಲಿ ಮಧ್ಯವರ್ತಿ ಇರುತ್ತಾರೆ, ಅವರು ಇಂತಿಷ್ಟು ಹಣವನ್ನು ಕಮಿಷನ್ ರೂಪದಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ, ಆನ್ಲೈನ್ ನಲ್ಲಿ ಕೊಂಚ ಭಿನ್ನ. ಇಲ್ಲಿ ಬಾಲ್ ಟು ಬಾಲ್, ಹೆಡ್ ಟು ಹೆಡ್ ಬೆಟ್ಟಿಂಗ್ ಹೀಗೆ ವಿವಿಧ ರೀತಿಯ ಬೆಟ್ಟಿಂಗ್ಗಳಿವೆ.
ಬಾಲ್ ಟು ಬಾಲ್ ಆಧಾರದಲ್ಲಿ ನಡೆಯುವ ಬೆಟ್ಟಿಂಗ್ ನಲ್ಲಿ ಪ್ರತಿ ಎಸೆತದಲ್ಲಿ ಏನಾಗಲಿದೆ ಎಂದು ಹೇಳುವ ಮೂಲಕ, ನಿಖರವಾಗಿ ಹೇಳಿದವರಿಗೆ ಕೋಟ್ಯಂತರ ರೂ. ಹಣ ಆನ್ಲೈನ್ ನಲ್ಲಿಯೇ ವರ್ಗಾವಣೆಯಾಗುತ್ತದೆ.
ಹೆಡ್ ಟು ಹೆಡ್ ಬೆಟ್ಟಿಂಗ್ ಅಂದರೆ ತಮ್ಮ ತಮ್ಮ ತಂಡ ಗೆದ್ದರೆ ಎದುರಾಳಿ ಇಂತಿಷ್ಟು ಹಣ ನಿಡಬೇಕು ಎಂದು ಮೊದಲೇ ಒಪ್ಪಂದ ಮಾಡಿಕೊಂಡು ಆಡುವುದು. ಅಂತಿಮವಾಗಿ ಗೆದ್ದವನಿಗೆ ಹಣ ಸಿಗುತ್ತದೆ.
ಆ್ಯಪ್ ಆಧಾರಿತ ಬೆಟ್ಟಿಂಗ್ ಗಳಲ್ಲಿ ಮೊದಲೇ ಇಂತಿಷ್ಟು ಹಣ ಪಾವತಿಸಿದರೆ ಗೆದ್ದವನಿಗೆ ಱಂಕಿಂಗ್ ಆಧಾರದದಲ್ಲಿ ಇಷ್ಟು ಹಣ ಎಂದು ನಿಗದಿಯಾಗಿರುತ್ತದೆ. ಕೆಲವು ಗಂಟೆಗಳಲ್ಲಿ ಮುಗಿಯುವ ಒಂದೊಂದು ಪಂದ್ಯಕ್ಕೆ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತದೆ.
ಈ ಎಲ್ಲದರ ಮೇಲೆ ನಿಗಾ ಇರಿಸಿದ್ದ ಸಿಸಿಬಿ ಐಪಿಎಲ್ ಮ್ಯಾಚ್ ನಡೆಯುತ್ತಿರುವಾಗ ಬೆಟ್ಟಿಂಗ್ ಆಡುವ ಒಂದೊಂದೆ ಅಡ್ಡೆ ಮೇಲೆ ಸರಣಿ ದಾಳಿ ಮಾಡಿದ್ದಾರೆ. ಸದ್ಯ 42 ಮಂದಿಯನ್ನು ಬಂಧಿಸಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.