ಬೆಂಗಳೂರು: ನಗರದ ಆಗರ ಕೆರೆ ಸರ್ವಿಸ್ ರಸ್ತೆಯಲ್ಲಿ ಮಂಗಳೂರಿನಿಂದ ಬಂದ ಬಸ್ನಿಂದ ನಗರದ ವಿವಿಧ ಭಾಗಗಳಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡಲು ಅಣಿಯಾಗಿದ್ದ ದಂಧೆಕೋರರನ್ನು ರೆಡ್ ಹ್ಯಾಂಡ್ ಆಗಿ ಹೆಚ್.ಎಸ್.ಆರ್. ಠಾಣೆಯ ಆರಕ್ಷಕ ಮುನಿ ರೆಡ್ಡಿ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ರಾಜ್ಯ ಮತ್ತು ಅಂತಾರಾಜ್ಯ ಡ್ರಗ್ಸ್ ದಂಧೆಕೋರರಾದ ನಾಲ್ವರನ್ನು ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.
ಕಾಸರಗೋಡಿನ ಮೊಹಮ್ಮದ್ ಮುಸ್ತಾಕ್ (31), ದಕ್ಷಿಣ ಕನ್ನಡ ಜಿಲ್ಲೆಯ ಪಿ.ಸಮೀರ್ (28), ಮೊದಮ್ಮದ್ ಅಪ್ರೀದ್ (23) ಹಾಗೂ ಕೇರಳ ಮೂಲದ ಮೊಹ್ಮದ್ ಆಶೀಕ್ (19) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ 15 ಲಕ್ಷ ರೂ. ಮೌಲ್ಯದ 48 ಕೆ.ಜಿ ಗಾಂಜಾ, 43 ಲಕ್ಷ ರೂ. 960ಗ್ರಾಂ ಹ್ಯಾಷ್ ಆಯಿಲ್, ಒಂದು ಸ್ಲೀಪರ್ ಕೋಚ್ ಬಸ್, ಒಂದು ಮ್ಯಾಕ್ಸಿ ಟ್ರಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.