ಬೆಂಗಳೂರು: ಬಿಬಿಎಂಪಿಯಲ್ಲಿ ಕಾಮಗಾರಿ ನಡೆಸಿದ ಗುತ್ತಿಗೆದಾರನಿಗೆ ಹಣ ಪಾವತಿಸದೇ, ನಕಲಿ ಖಾತೆಗೆ 4.15 ಕೋಟಿ ರೂಪಾಯಿ ವರ್ಗಾಯಿಸಿ ವಂಚಿಸಿದ ಆರೋಪದ ಮೇಲೆ ಮೂವರು ಅಧಿಕಾರಿಗಳು ಅಮಾನತುಗೊಂಡಿದ್ದಾರೆ.
ಹಣಕಾಸು ವಿಭಾಗದ ಲೆಕ್ಕ ಅಧೀಕ್ಷಕರಾದ ರಾಮಮೂರ್ತಿ, ಅನಿತಾ, ದ್ವಿತೀಯ ದರ್ಜೆ ಸಹಾಯಕ ರಾಘವೇಂದ್ರ ವಿರುದ್ಧ ಬಿಎಂಟಿಎಫ್ನಲ್ಲಿ ದೂರು ದಾಖಲಾಗಿದೆ. ಗುತ್ತಿಗೆದಾರ ಚಂದ್ರಪ್ಪ ಅವರು ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್ಗೆ ದೂರು ಸಲ್ಲಿಸಿದ್ದು, ಈ ಹಿನ್ನಲೆ ಕೇಸ್ ದಾಖಲಲಿಸಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಹೊರಮಾವು ವಾರ್ಡ್ನಲ್ಲಿ ಒಳಚರಂಡಿ ಕೊಳವೆ ಅಳವಡಿಸುವ ಕಾಮಗಾರಿಯ ಬಿಲ್ಲನ್ನು ಚಂದ್ರಪ್ಪ ಅವರಿಗೆ ಹೆಣ್ಣೂರು ಮುಖ್ಯರಸ್ತೆಯ ಯೂನಿಯನ್ ಬ್ಯಾಂಕ್ ಶಾಖೆಗೆ ಜಮೆ ಮಾಡಬೇಕಿತ್ತು. ಆದರೆ ಅಧಿಕಾರಿಗಳು ಹಂಪಿ ನಗರದ ಜನತಾ ಸೇವಾ ಕೋ-ಆಪರೇಟಿವ್ ಶಾಖೆಯಲ್ಲಿ ಸಿ.ಜಿ. ಚಂದ್ರಪ್ಪ ಹೆಸರಿನಲ್ಲಿ ಖಾತೆ ತೆರೆದು ಇದೇ ಫೆ.4ರಂದು 4.15 ಕೋಟಿ ಬಿಲ್ ಜಮೆ ಮಾಡಿದ್ದಾರೆ ಎನ್ನಲಾಗ್ತಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ರಾಮಮೂರ್ತಿ ವಿರುದ್ಧ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಗೆ ದೂರು ನೀಡಿದ್ದರು.