ಬೆಂಗಳೂರು : ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಗೃಹ ಜ್ಯೋತಿಯೂ ಒಂದು. ಆಗಸ್ಟ್ನಿಂದ ಸರ್ಕಾರ ರಾಜ್ಯದ ಜನರಿಗೆ ಸರಾಸರಿ ಬಳಕೆಯನ್ವಯ 200 ಯುನಿಟ್ವರೆಗೆ ಉಚಿತ ವಿದ್ಯುತ್ ಪೂರೈಸುತ್ತಿದೆ. ಈವರೆಗೆ ಎಸ್ಕಾಂಗಳು ಎಷ್ಟು ಬಳಕೆದಾರರಿಗೆ ಉಚಿತ ವಿದ್ಯುತ್ ಪೂರೈಸಿದೆ?. ಉಚಿತ ವಿದ್ಯುತ್ ಬಿಲ್ ಮೊತ್ತ ಎಷ್ಟು ಎಂಬ ವರದಿ ಇಲ್ಲಿದೆ.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಗೃಹ ಜ್ಯೋತಿ ಪ್ರಮುಖ ಗ್ಯಾರಂಟಿ ಯೋಜನೆಯಾಗಿದೆ. 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಈ ಯೋಜನೆ ಕಳೆದ ಆಗಸ್ಟ್ನಿಂದ ಜಾರಿಯಾಗಿದೆ. ಆಗಸ್ಟ್ ತಿಂಗಳಿಂದ ಬಿಲ್ಗಳನ್ನು ಗೃಹ ಜ್ಯೋತಿಯಡಿ ನೀಡಲಾಗುತ್ತಿದೆ. ಕಳೆದ ವರ್ಷದ ಸರಾಸರಿ ವಿದ್ಯುತ್ ಬಳಕೆಗೆ 10% ಸೇರಿಸಿ ಉಚಿತ ವಿದ್ಯುತ್ ಬಳಕೆ ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತಿದೆ.
ಗೃಹ ಜ್ಯೋತಿಯಡಿ ಉಚಿತ ವಿದ್ಯುತ್ ಬಳಕೆದಾರರ ಸಂಖ್ಯೆ ಪ್ರತಿ ತಿಂಗಳು ಏರಿಕೆ ಕಾಣುತ್ತಿದೆ. ಸಾಕಷ್ಟು ಗೊಂದಲದ ಬಳಿಕ ರಾಜ್ಯ ಸರ್ಕಾರ ಗೃಹ ಜ್ಯೋತಿ ಯೋಜನೆಯನ್ನು ಅನುಷ್ಠಾನಗೊಳಿಸಿತು. ಎಸ್ಕಾಂಗಳು ಗೃಹ ಜ್ಯೋತಿ ಯೋಜನೆಯಡಿ ಯೋಜನೆ ಫಲಾನುಭವಿಗಳಿಗೆ ವಿದ್ಯುತ್ ಸರಬರಾಜು ಮಾಡಿ, ಅದಕ್ಕನುಗುಣವಾಗಿ ಬೇಡಿಕೆಯಾಗುವ ಮೊತ್ತವನ್ನು ಸಹಾಯಧನದ ರೂಪದಲ್ಲಿ ಸರ್ಕಾರದಿಂದ ಪಡೆಯಲಿವೆ.
3 ತಿಂಗಳ ಉಚಿತ ವಿದ್ಯುತ್ ಮೊತ್ತ 2,125 ಕೋಟಿ ರೂ: ಐದು ಎಸ್ಕಾಂಗಳು ತಮ್ಮ ಗೃಹ ಬಳಕೆಯ ಗ್ರಾಹಕರುಗಳಿಗೆ ಗೃಹ ಜ್ಯೋತಿ ಉಚಿತ ವಿದ್ಯುತ್ ಪೂರೈಸುತ್ತಿವೆ. ಸರಾಸರಿ ಆಧಾರದಲ್ಲಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮೂರು ತಿಂಗಳಲ್ಲಿ ಗೃಹ ಜ್ಯೋತಿಯಡಿ ಒಟ್ಟು 2,125 ಕೋಟಿ ರೂಪಾಯಿಯಷ್ಟು ಉಚಿತ ವಿದ್ಯುತ್ ಬಳಕೆ ಮಾಡಿದ್ದಾರೆ. ಸುಮಾರು 4.12 ಕೋಟಿ ಗೃಹ ಬಳಕೆಯ ವಿದ್ಯುತ್ ಬಳಕೆದಾರರು ಗೃಹ ಜ್ಯೋತಿಯಡಿ ವಿದ್ಯುತ್ ಬಳಸುತ್ತಿದ್ದಾರೆ.
ಅಧಿವೇಶನದಲ್ಲಿ ಕೇಳಲಾದ ಚುಕ್ಕೆ ರಹಿತ ಪ್ರಶ್ನೆಗೆ ಇಂಧನ ಇಲಾಖೆ ನೀಡಿದ ಅಂಕಿ ಅಂಶದ ಪ್ರಕಾರ, ಆಗಸ್ಟ್ ತಿಂಗಳಲ್ಲಿ ಐದು ಎಸ್ಕಾಂಗಳು ಗೃಹ ಜ್ಯೋತಿಯಡಿ ಸುಮಾರು 1.28 ಕೋಟಿ ಬಳಕೆದಾರರು ಉಚಿತ ವಿದ್ಯುತ್ ಬಳಸಿದ್ದಾರೆ. ಆ ಮೂಲಕ ನೀಡಲಾದ ಉಚಿತ ವಿದ್ಯುತ್ ಬಿಲ್ ಮೊತ್ತ 643 ಕೋಟಿ ರೂಪಾಯಿ.
ಸೆಪ್ಟೆಂಬರ್ ತಿಂಗಳಲ್ಲಿ ಗೃಹ ಜ್ಯೋತಿಯಡಿ ಸುಮಾರು 1.39 ಕೋಟಿ ಬಳಕೆದಾರರು ಉಚಿತ ವಿದ್ಯುತ್ ಬಳಸಿದ್ದು, ಆ ಮೂಲಕ ನೀಡಲಾದ ಉಚಿತ ವಿದ್ಯುತ್ ಬಿಲ್ ಮೊತ್ತ 735 ಕೋಟಿ ರೂ. ಆಗಿದೆ. ಅದೇ ರೀತಿ ಅಕ್ಟೋಬರ್ ತಿಂಗಳಲ್ಲಿ ಸುಮಾರು 1.44 ಕೋಟಿ ಬಳಕೆದಾರರು ಉಚಿತ ವಿದ್ಯುತ್ ಬಳಸಿದ್ದಾರೆ. ಆ ಮೂಲಕ ಒಟ್ಟು 747 ಕೋಟಿ ರೂ.ದಷ್ಟು ಉಚಿತ ವಿದ್ಯುತ್ ನೀಡಲಾಗಿದೆ.
ಬೆಸ್ಕಾಂನ ಗೃಹ ಜ್ಯೋತಿ ಸ್ಥಿತಿಗತಿ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ)ನಲ್ಲಿ ಗೃಹ ಜ್ಯೋತಿಯಡಿ ಆಗಸ್ಟ್ ನಲ್ಲಿ 51.38 ಲಕ್ಷ ಬಳಕೆದಾರರು ಉಚಿತ ವಿದ್ಯುತ್ ಬಳಸಿದ್ದಾರೆ. ಸೆಪ್ಟೆಂಬರ್ ನಲ್ಲಿ 57.75 ಲಕ್ಷ ಬಳಕೆದಾರರು ವಿದ್ಯುತ್ ಬಳಸಿದ್ದಾರೆ. ಅಕ್ಟೋಬರ್ ನಲ್ಲಿ 60.97 ಲಕ್ಷ ಬಳಕೆದಾರರು ಉಚಿತ ವಿದ್ಯುತ್ ಬಳಸಿದ್ದಾರೆ. ಆ ಮೂಲಕ ಮೂರು ತಿಂಗಳಲ್ಲಿ ಬೆಸ್ಕಾಂ ವ್ಯಾಪ್ತಿಯಲ್ಲಿ ಉಚಿತ ವಿದ್ಯುತ್ ಬಳಕೆ ಮೊತ್ತ ಒಟ್ಟು 1001 ಕೋಟಿ ರೂ. ಆಗಿದೆ.
ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಮೆಸ್ಕಾಂ)ನಲ್ಲಿ ಗೃಹ ಜ್ಯೋತಿಯಡಿ ಆಗಸ್ಟ್ ನಲ್ಲಿ 13.36 ಲಕ್ಷ ಬಳಕೆದಾರರು ಉಚಿತ ವಿದ್ಯುತ್ ಬಳಸಿದ್ದಾರೆ. ಸೆಪ್ಟೆಂಬರ್ ನಲ್ಲಿ 14.20 ಲಕ್ಷ ಬಳಕೆದಾರರು ವಿದ್ಯುತ್ ಬಳಸಿದ್ದಾರೆ. ಅಕ್ಟೋಬರ್ ನಲ್ಲಿ 14.78 ಲಕ್ಷ ಬಳಕೆದಾರರು ಉಚಿತ ವಿದ್ಯುತ್ ಬಳಸಿದ್ದಾರೆ. ಆ ಮೂಲಕ ಮೂರು ತಿಂಗಳಲ್ಲಿ ಮೆಸ್ಕಾಂ ವ್ಯಾಪ್ತಿಯಲ್ಲಿ ಉಚಿತ ವಿದ್ಯುತ್ ಬಳಕೆ ಮೊತ್ತ ಒಟ್ಟು 235 ಕೋಟಿ ರೂ. ಆಗಿದೆ.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಸೆಸ್ಕ್)ನಲ್ಲಿ ಗೃಹ ಜ್ಯೋತಿಯಡಿ ಆಗಸ್ಟ್ ನಲ್ಲಿ 19.87 ಲಕ್ಷ ಬಳಕೆದಾರರು ಉಚಿತ ವಿದ್ಯುತ್ ಬಳಸಿದ್ದಾರೆ. ಸೆಪ್ಟೆಂಬರ್ ನಲ್ಲಿ 20.95 ಲಕ್ಷ ಬಳಕೆದಾರರು ವಿದ್ಯುತ್ ಬಳಸಿದ್ದಾರೆ. ಅಕ್ಟೋಬರ್ ನಲ್ಲಿ 21.64 ಲಕ್ಷ ಬಳಕೆದಾರರು ಉಚಿತ ವಿದ್ಯುತ್ ಉಪಯೋಗಿಸಿದ್ದಾರೆ. ಆ ಮೂಲಕ ಮೂರು ತಿಂಗಳಲ್ಲಿ ಸೆಸ್ಕ್ ವ್ಯಾಪ್ತಿಯಲ್ಲಿ ಉಚಿತ ವಿದ್ಯುತ್ ಬಳಕೆ ಮೊತ್ತ ಒಟ್ಟು 239 ಕೋಟಿ ರೂ. ಆಗಿದೆ.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ)ನಲ್ಲಿ ಗೃಹ ಜ್ಯೋತಿಯಡಿ ಆಗಸ್ಟ್ ನಲ್ಲಿ 25.22 ಲಕ್ಷ ಬಳಕೆದಾರರು ಉಚಿತ ವಿದ್ಯುತ್ ಬಳಸಿದ್ದಾರೆ. ಸೆಪ್ಟೆಂಬರ್ ನಲ್ಲಿ 26.76 ಲಕ್ಷ ಬಳಕೆದಾರರು ವಿದ್ಯುತ್ ಬಳಸಿದ್ದಾರೆ. ಅಕ್ಟೋಬರ್ ನಲ್ಲಿ 27.21 ಲಕ್ಷ ಬಳಕೆದಾರರು ಉಚಿತ ವಿದ್ಯುತ್ ಬಳಸಿದ್ದಾರೆ. ಆ ಮೂಲಕ ಮೂರು ತಿಂಗಳಲ್ಲಿ ಹೆಸ್ಕಾಂ ವ್ಯಾಪ್ತಿಯಲ್ಲಿ ಉಚಿತ ವಿದ್ಯುತ್ ಬಳಕೆ ಮೊತ್ತ ಒಟ್ಟು 391ಕೋಟಿ ರೂ. ಆಗಿದೆ.
ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಜೆಸ್ಕಾಂ)ನಲ್ಲಿ ಗೃಹ ಜ್ಯೋತಿಯಡಿ ಆಗಸ್ಟ್ ನಲ್ಲಿ 19.10 ಲಕ್ಷ ಬಳಕೆದಾರರು ಉಚಿತ ವಿದ್ಯುತ್ ಬಳಸಿದ್ದಾರೆ. ಸೆಪ್ಟೆಂಬರ್ ನಲ್ಲಿ 19.58 ಲಕ್ಷ ಬಳಕೆದಾರರು ವಿದ್ಯುತ್ ಬಳಸಿದ್ದಾರೆ. ಅಕ್ಟೋಬರ್ ನಲ್ಲಿ 19.89 ಲಕ್ಷ ಬಳಕೆದಾರರು ಉಚಿತ ವಿದ್ಯುತ್ ಬಳಸಿದ್ದಾರೆ. ಆ ಮೂಲಕ ಮೂರು ತಿಂಗಳಲ್ಲಿ ಮೆಸ್ಕಾಂ ವ್ಯಾಪ್ತಿಯಲ್ಲಿ ಉಚಿತ ವಿದ್ಯುತ್ ಬಳಕೆ ಮೊತ್ತ ಒಟ್ಟು 259 ಕೋಟಿ ರೂ. ಆಗಿದೆ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆ: ಚಾಮುಂಡೇಶ್ವರಿ ತಾಯಿಗೆ ಐದು ವರ್ಷದ ಹಣ ಅರ್ಪಣೆ