ಬೆಂಗಳೂರು: ಹಳೆದ್ವೇಷದ ಹಿನ್ನೆಲೆ ಪುಟ್ಬಾಲ್ ಮೈದಾನಕ್ಕೆ ನುಗ್ಗಿ ರೌಡಿಶೀಟರ್ ಅರವಿಂದ ಎಂಬವನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ನಾಲ್ವರು ಆರೋಪಿಗಳನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿಯ ನ್ಯೂ ಬಾಗಲೂರು ಲೇಔಟ್ ನಿವಾಸಿಗಳಾದ ಸ್ಟಾಲಿನ್, ಜಾಕ್, ವಿಜಯ್ ಹಾಗೂ ಅರುಣ್ ಬಂಧಿತರು. ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ. ಬಂಧಿತರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಕಳೆದ ಭಾನುವಾರ ಅಶೋಕ ನಗರ ಠಾಣಾ ವ್ಯಾಪ್ತಿಯ ಕರ್ನಾಟಕ ರಾಜ್ಯ ಪುಟ್ಬಾಲ್ ಅಸೋಸಿಯೇಷನ್ ಮೈದಾನಕ್ಕೆ ನುಗ್ಗಿದ್ದ ಐವರು ಹಂತಕರು ರೌಡಿಶೀಟರ್ ಅರವಿಂದ್ ಗುರಿಯಾಗಿಸಿಕೊಂಡು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಳೆ ವೈಷ್ಯಮ್ಯವೇ ಕೊಲೆಗೆ ಕಾರಣ
ಭಾರತಿ ನಗರ, ಪುಲಕೇಶಿನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಮೃತ ಅರವಿಂದ್ ವಿರುದ್ಧ ಪ್ರಕರಣ ದಾಖಲಾಗಿದ್ದವು. ಅಪರಾಧ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಆತ ಕಳೆದ ಆರು ತಿಂಗಳ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ. ಏರಿಯಾದಲ್ಲಿ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆತ ಆರು ತಿಂಗಳ ಹಿಂದೆ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯ ರೌಡಿಶೀಟರ್ ಸ್ಟಾಲಿನ್ ಸಹೋದರ ಸುಭಾಷ್ ಎಂಬಾತನೊಂದಿಗೆ ಜಗಳ ಮಾಡಿಕೊಂಡಿದ್ದ. ಅಲ್ಲದೆ ಬಂಧಿತ ಇನ್ನುಳಿದ ಕೆಲವು ಆರೋಪಿಗಳ ಮೇಲೂ ಅಟ್ಯಾಕ್ ಮಾಡಿಸಿದ್ದ.
ಇದರಿಂದ ಕೋಪಗೊಂಡಿದ್ದ ಆರೋಪಿಗಳು ಅರವಿಂದನನ್ನು ಮುಗಿಸಲು ತೆರೆಮರೆಯಲ್ಲಿ ಕತ್ತಿ ಮಸೆಯುತ್ತಿದ್ದರು. ಈ ಹಿಂದೆ ಎರಡು-ಮೂರು ಬಾರಿ ಅರವಿಂದ್ ಮೇಲೆ ಅಟ್ಯಾಕ್ ಮಾಡಿದ್ದರು. ಈ ಸಂಬಂಧ ಅರವಿಂದ್ ಕೂಡ ಪೂರ್ವ ವಿಭಾಗದ ಪೊಲೀಸರಿಗೆ ದೂರು ನೀಡಿದ್ದ. ಕಳೆದ ಭಾನುವಾರ ಪುಟ್ಟಾಲ್ ಸ್ಟೇಡಿಯಂಗೆ ಅರವಿಂದ್ ಬರುತ್ತಿರುವ ಮಾಹಿತಿ ಪಡೆದ ಹಂತಕರು ಮಾರಕಾಸ್ತ್ರಗಳೊಂದಿಗೆ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ರೌಡಿ ಚಟುವಟಿಕೆ ಜೊತೆ ಪುಟ್ಬಾಲ್ ಕ್ರೇಜ್ ಹೊಂದಿದ್ದ ಮೃತ ಅರವಿಂದ್, ಸ್ಥಳೀಯ ಮಟ್ಟದಲ್ಲಿ ಪುಟ್ಬಾಲ್ ತಂಡ ವೊಂದಕ್ಕೆ ಮ್ಯಾನೇಜರ್ ಆಗಿದ್ದ. ಸ್ನೇಹಿತರ ಸ್ಮರಣಾರ್ಥ ಸ್ಥಾಪಿಸಿದ್ದ ಕಾರ್ತಿಕ್- ದಿಲೀಪ್ ಪುಟ್ಬಾಲ್ ಅಸೋಸಿಯೇಷನ್ಗೆ (ಕೆಡಿಎಫ್ಎ) ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ:ತಪ್ಪಿಸಿಕೊಳ್ಳಲು ಫುಟ್‌ಬಾಲ್ ಸ್ಟೇಡಿಯಂನೊಳಗೆ ನುಗ್ಗಿದ್ರೂ ಬಿಡದೆ ರೌಡಿಶೀಟರ್ ಹತ್ಯೆ: ಸಿಸಿಟಿವಿ ದೃಶ್ಯ