ಬೆಂಗಳೂರು : ರಾಜ್ಯದ 29 ಜಿಲ್ಲಾ ಹಾಗೂ 117 ತಾಲೂಕು ಕ್ರೀಡಾಂಗಣಗಳನ್ನು ಸುಸ್ಥಿತಿಗೆ ತರಲು 381 ಕೋಟಿ ರೂ. ಬೇಕಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ. ಟಿ. ರವಿ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ಅವಧಿ ವೇಳೆ ಬಿಜೆಪಿ ಶಾಸಕ ಎಸ್.ಕುಮಾರ ಬಂಗಾರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಸಿ.ಟಿ.ರವಿ , 29 ಜಿಲ್ಲಾ ಕ್ರೀಡಾಂಗಣಗಳ ಅಭಿವೃದ್ಧಿಗೆ 147 ಕೋಟಿ ರೂ. ಹಾಗೂ 117 ತಾಲೂಕು ಕ್ರೀಡಾಂಗಣಗಳಿಗೆ 234 ಕೋಟಿ ರೂ. ಬೇಕಾಗಿದೆ. ಆದರೆ ಈ ವರ್ಷ 11.60 ಕೋಟಿ ರೂ. ಮಾತ್ರ ಲಭ್ಯವಿದ್ದು, ಸಾಧ್ಯವಾದಷ್ಟು ಕ್ರೀಡಾಂಗಣಗಳಿಗೆ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಸೊರಬ ಪಟ್ಟಣದಲ್ಲಿ 10 ಎಕರೆ ಪ್ರದೇಶದಲ್ಲಿ ಎಸ್. ಬಂಗಾರಪ್ಪನವರ ಹೆಸರಿನಲ್ಲಿ ತಾಲೂಕು ಕ್ರೀಡಾಂಗಣ ಸ್ಥಾಪಿಸಲಾಗಿದೆ. ಅದರಲ್ಲಿ ಫೆವಿಲಿಯನ್, ಪ್ರೇಕ್ಷಕರ ಗ್ಯಾಲರಿ, ಶೌಚಾಲಯ, ನೀರು ಸರಬರಾಜು, ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ರಾಜ್ಯದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟಗಳನ್ನು ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ಅಥ್ಲೆಟಿಕ್ ಟ್ರ್ಯಾಕ್ ಅಳವಡಿಸಲು, ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಕೇಂದ್ರ ಸರ್ಕಾರದಿಂದ ಮಂಜೂರಾತಿ ದೊರೆತು ಅನುದಾನ ಬಿಡುಗಡೆಯಾದ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.