ಬೆಂಗಳೂರು: ಪ್ರತಿದಿನ ಅತಿಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳು ನಗರದಲ್ಲಿ ದೃಢಪಡುತ್ತಿದ್ದು, ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ ಹೆಚ್ಚುತ್ತಿದೆ. ಸೋಮವಾರ ಸಹ ನಗರದಲ್ಲಿ 35 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಸೋಂಕಿತರ ಸಂಖ್ಯೆ 725 ತಲುಪಿದೆ.
ನಗರದ ಕಂಟೈನ್ಮೆಂಟ್ ಪ್ರದೇಶಗಳ ಸಂಖ್ಯೆ 191 ಕ್ಕೆ ಏರಿಕೆಯಾಗಿದೆ. ಸೋಮವಾರ ಮೃತಪಟ್ಟವರ ಪೈಕಿ ಒಬ್ಬರ ವಿವರ ಹೆಲ್ತ್ ಬುಲೆಟಿನ್ ವರದಿ ಮಾಡಿದ್ದು, 75 ವರ್ಷದ ಮಹಿಳೆ ಸೋಂಕು ಲಕ್ಷಣದಿಂದ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗದೆ ಮೃತಪಟ್ಟಿದ್ದಾರೆ. ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. 329 ಮಂದಿ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದು, 362 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 35 ಕೋವಿಡ್ ಪ್ರಕರಣಗಳ ಪೈಕಿ 11 ಪ್ರಕರಣ ಬಿಬಿಎಂಪಿ ಹೊರವ್ಯಾಪ್ತಿಯದ್ದಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಮಾರೇನಹಳ್ಳಿಯದಲ್ಲಿ ಎಸಿಮ್ಟಮ್ಯಾಟಿಕ್ನ ಐದು ಪ್ರಕರಣಗಳಲ್ಲಿ ಸೋಮವಾರ ಕೊರೊನಾ ದೃಢಪಟ್ಟಿದೆ. ಇಟ್ಟಮಡು, ಪಾರ್ವತಿಪುರಂ, ಜಯನಗರ ಗುಟ್ಟೆಪಾಳ್ಯ, ಕಾಕ್ಸ್ ಟೌನ್, ಫ್ರೇಜರ್ ಟೌನ್ ನಗರತ್ ಪೇಟೆ, ಪಾರ್ವತಿಪುರಂ, ಸುಲ್ತಾನ್ ಪಾಳ್ಯ, ಜಯನಗರ 9 ನೇ ಬ್ಲಾಕ್, ಬಿಎಸ್‌ಕೆ 3ನೇ ಸ್ಟೇಜ್, ತಾವರೆಕೆರೆ, ನಾಗಣ್ಣಪಾಳ್ಯ, ವಿಲಿಯಮ್ಸ್ ಟೌನ್ನಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ವಿದ್ಯಾರಣ್ಯಪುರ, ನಾಗದೇವನಹಳ್ಳಿ, ಹೆಚ್‌ಎಸ್‌ಆರ್ ಪೊಲೀಸ್ ಸ್ಟೇಷನ್, ಕೆ.ಆರ್ ಪುರಂ, ಕೆಂಗೇರಿ ಉಪನಗರ, ತಿಂಡ್ಲು, ಕೆ.ಜಿ ಹಳ್ಳಿ, ಎಲೆಕ್ಟ್ರಾನಿಕ್ ಸಿಟಿಗಳಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ನಗರವ್ಯಾಪ್ತಿಯಲ್ಲಿ ಕೊರೊನಾ ದೃಢಪಟ್ಟವರ ಪೈಕಿ ಬಹುತೇಕ ಜನ ಕೊರೊನಾ ಸೋಂಕು ಲಕ್ಷಣದಿಂದ ಬಳಲುತ್ತಿದ್ದರು. ಇನ್ನು ಅನೇಕರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಲಾಕ್‌ಡೌನ್ ಸಡಿಲಿಕೆಯಾದ ಬಳಿಕ ಕೊರೊನಾ ಸೋಂಕಿತರ ದಿಢೀರ್ ಏರಿಕೆಯಾಗಿದೆ. ಜನರ ಓಡಾಟ ಹೆಚ್ಚಾದ ಮೇಲೆ ಅತಿಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ಲಾಕ್‌ಡೌನ್ ಇದ್ದಾಗ ಮೇ ತಿಂಗಳಲ್ಲಿ 358 ಇದ್ದ ಪ್ರಕರಣ ಜೂನ್ ತಿಂಗಳಲ್ಲಿ ಏಕಾಏಕಿ 732 ಕ್ಕೆ ಏರಿಕೆಯಾಗಿದೆ. ಕೇವಲ ಹದಿನೈದು ದಿನದಲ್ಲಿ 350 ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ.