ಬೆಂಗಳೂರು: ಕರ್ತವ್ಯ ನಿರ್ವಹಿಸುವಾಗ ಸಾವನ್ನಪ್ಪಿದ ಪೊಲೀಸ್ ಸಿಬ್ಬಂದಿಗೆ 30 ಲಕ್ಷ ಪರಿಹಾರ ನೀಡುವ ರೀತಿಯಲ್ಲೇ ಅರಣ್ಯ ಸಂರಕ್ಷರು ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಸಾವನ್ನಪಿದರೆ ಅರಣ್ಯ ಪಾಲಕರಿಗೂ 30 ಲಕ್ಷ ಪರಿಹಾರ ನೀಡಲಾಗುತ್ತದೆಯೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ನಿಮಿತ್ತ ಮಲ್ಲೇಶ್ವರಂನಲ್ಲಿರುವ ಅರಣ್ಯ ಭವನದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಯಡಿಯೂರಪ್ಪ ಅರಣ್ಯ ಹುತಾತ್ಮರಿಗೆ ಶ್ರದ್ಧಾಂಜಲಿ ಸಮರ್ಪಿಸಿದರು. ಬಳಿಕ ಮಾತನಾಡಿದ ಸಿಎಂ, ಅರಣ್ಯಪಾಲಕರು ಕರ್ತವ್ಯದಲ್ಲಿದ್ದಾಗ ಮೃತಪಟ್ಟರೆ 20 ಲಕ್ಷ ಪರಿಹಾರ ಕೊಡಲಾಗುತ್ತಿದ್ದು, ಅದನ್ನ 30 ಲಕ್ಷಕ್ಕೆ ಹೆಚ್ಚಿಸಿ ಎಂದು ಮನವಿ ಬಂದಿದೆ. ಹೀಗಾಗಿ ಅರಣ್ಯ ಸಂರಕ್ಷಕರು ಕರ್ತವ್ಯ ನಿರ್ವಹಣೆ ಮಾಡುವಾಗ ತೀರಿಕೊಂಡರೆ 30 ಲಕ್ಷ ರೂ ಪರಿಹಾರ ನೀಡಲಾಗುವುದು, ಈ ಸಂಬಂಧ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಇಂದೇ ಆದೇಶ ನೀಡುತ್ತೇನೆ ಎಂದರು.
ಅಲ್ಲದೇ, ಅರಣ್ಯ ಸಂರಕ್ಷಣೆ ಮಾಡುತ್ತಾ ಪ್ರಾಣತ್ಯಾಗ ಮಾಡಿದ ಮಹನೀಯರ ಸ್ಮರಣಾರ್ಥ ಕಾರ್ಯಕ್ರಮವಿದು, ಹುತಾತ್ಮರ ಸ್ಮರಣೆ ನಮ್ಮ ಕರ್ತವ್ಯ. ವೇದಗಳಲ್ಲಿಯೂ ಕಾಡಿನ ಪ್ರಾಮುಖ್ಯತೆ ಬಗ್ಗೆ ಉಲ್ಲೇಖವಿದ್ದು ಕಾಡು ಉಳಿಸುವ ಮೂಲಕ ಪರಿಸರದ ಸಮತೋಲನ ಕಾಯ್ದುಕೊಳ್ಳಬೇಕಿದೆ. ಜೊತೆಗೆ ನಮ್ಮ ರಾಜ್ಯದಲ್ಲಿ ಸಂಪದ್ಭರಿತ ಅರಣ್ಯ ಪ್ರದೇಶವಿದ್ದು, ವನ್ಯಜೀವಿಗಳ ಸಂಖ್ಯೆಯೂ ಹೆಚ್ಚಿದೆ. ಅರಣ್ಯ ಸಂಪತ್ತು, ವನ್ಯಜೀವಿಗಳ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಅರಣ್ಯಾಧಿಕಾರಿಗಳು, ಸಿಬ್ಬಂದಿ ಹೆಸರು ಚಿರಸ್ಥಾಯಿಯಾಗಿದೆ ಎಂದು ಹೇಳಿದರು.
ಇನ್ನೂ, ವನ್ಯ ಮೃಗಗಳ ಸಂಘರ್ಷ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಆನೆಗಳ ದಾಳಿಯಿಂದ ಅನೇಕ ಸಮಸ್ಯೆಯಾಗಿದೆ. ಇದಕ್ಕಾಗಿ ಸರ್ಕಾರ ಯೋಜನೆ ರೂಪಿಸಿದ್ದು ಇಲಾಖೆಯನ್ನು ಮತ್ತಷ್ಟು ಬಲ ಪಡಿಸಬೇಕಿದೆಯೆಂದು ಸಿಎಂ ಅಭಿಪ್ರಾಯಪಟ್ಟರು.