ಬೆಂಗಳೂರು: ನಾಡಹಬ್ಬ ದಸರಾ ಸಿದ್ಧತೆ ಆರಂಭವಾಗಬೇಕಿರುವ ಸಮಯದಲ್ಲೇ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಸೇರಿದಂತೆ ಮೂರು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.
ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವಲ್ಲಿ ಡಿಸಿ ಮಹತ್ವದ ಜವಾಬ್ದಾರಿ ವಹಿಸಿದ್ದರು. ಆದರೆ ಇತ್ತೀಚೆಗೆ ಜಿಲ್ಲಾಡಳಿತದ ಒತ್ತಡದಿಂದ ನಂಜನಗೂಡು ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ, ನೇರ ಆರೋಪ ಎದುರಿಸದಿದ್ದರೂ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಸ್ವಲ್ಪಮಟ್ಟಿಗೆ ಮುಜುಗರಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಆರೋಗ್ಯಾಧಿಕಾರಿಗಳು ಅಭಿರಾಮ್ ಶಂಕರ್ ಅವರನ್ನು ಸಮರ್ಥಿಸಿಕೊಂಡು ಘಟನೆಗೆ ಜಿಲ್ಲಾ ಪಂಚಾಯತ್ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಕಾರಣ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಿಶ್ರಾ ವಿರುದ್ಧ ಎಫ್‌ಐಆರ್ ಸಹ ದಾಖಲಾಗಿದ್ದು, ಮಿಶ್ರಾ ವರ್ಗಾವಣೆಯಿಂದಾಗಿ ಸಿಇಓ ಜವಾಬ್ದಾರಿಯನ್ನೂ ಸಹ ತಾತ್ಕಾಲಿಕವಾಗಿ ಅಭಿರಾಮ್ ಜಿ. ಶಂಕರ್ ವಹಿಸಿಕೊಂಡಿದ್ದರು.
ಇದೀಗ ಅಭಿರಾಮ್ ಜಿ. ಶಂಕರ್ ಅವರನ್ನು ಮೈಸೂರಿನ ಆಡಳಿತಾತ್ಮಕ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕರಾಗಿ ನೇಮಿಸಲಾಗಿದೆ. ಅಭಿರಾಮ್ ಅವರು ಸ್ವತಃ ವರ್ಗಾವಣೆಗೆ ಮನವಿ ಮಾಡಿದ್ದರು ಎಂದು ಹೇಳಲಾಗುತ್ತಿದೆ.
ಉಳಿದಂತೆ ಕಲಬುರಗಿಯಲ್ಲಿ ಕೊರೊನಾ ನಿಯಂತ್ರಣ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕಲಬುರಗಿ ಜಿಲ್ಲಾಧಿಕಾರಿ ಬಿ. ಶರತ್ ಅವರನ್ನು ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ವರ್ಗಾಯಿಸಲಾಗಿದೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ ಅವರನ್ನು ಕಲಬುರಗಿ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಆಡಳಿತಾತ್ಮಕ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕರಾಗಿ ನೇಮಕಗೊಂಡಿದ್ದ ಪಾಟೀಲ ಎಲಗೌಡ ಶಿವಾನಂದಗೌಡ ಅವರ ನೇಮಕಾತಿ ಆದೇಶವನ್ನು ರದ್ದುಪಡಿಸಲಾಗಿದೆ.