ಬೆಂಗಳೂರು: ವಿಧಾನ ಪರಿಷತ್ನಲ್ಲಿ ತಡೆಹಿಡಿಯಲ್ಪಟ್ಟಿದ್ದ ಸೇಂಟ್ ಜೋಸೆಫ್ ವಿವಿ ವಿಧೇಯಕ ಸೇರಿದಂತೆ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಮೂರು ವಿಧೇಯಕಗಳಿಗೆ ವಿಧಾನ ಪರಿಷತ್ ಅಂಗೀಕಾರ ನೀಡಿತು.
ವಿಧಾನ ಪರಿಷತ್ನ ಬೆಳಗಿನ ಕಲಾಪದ ಶೂನ್ಯ ವೇಳೆ ನಂತರ ಡಿಸಿಎಂ ಅಶ್ವತ್ಥ ನಾರಾಯಣ ವಿಧೇಯಕ ಮಂಡನೆ ಮಾಡಿದರು. ರಾಜ್ಯಪಾಲರ ಅನುಮೋದನೆ ಪಡೆಯುವ ತಾಂತ್ರಿಕ ಕಾರಣದಿಂದ ವಿಧಾನ ಪರಿಷತ್ನಲ್ಲಿ ತಡೆಹಿಡಿಯಲಾಗಿದ್ದ ವಿಧೇಯಕದ ತಾಂತ್ರಿಕ ಸಮಸ್ಯೆ ನಿವಾರಿಸಲಾಗಿದೆ. ಹಾಗಾಗಿ ವಿಧೇಯಕವನ್ನು ಅಂಗೀಕರಿಸುವಂತೆ ಸದನವನ್ನು ಕೋರಿದರು.
ಈಗಾಗಲೇ ವಿಧೇಯಕದ ಮೇಲೆ ಚರ್ಚೆ ನಡೆಸಿದ್ದರಿಂದ ಇಂದು ಮತ್ತೆ ಚರ್ಚೆ ನಡೆಸದೆ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ವಿಧೇಯಕಕ್ಕೆ ಸಮ್ಮತಿ ನೀಡಿದರು. ನಂತರ ಧ್ವನಿ ಮತದ ಮೂಲಕ ಸೇಂಟ್ ಜೋಸೆಫ್ ವಿವಿ ವಿಧೇಯಕವನ್ನು ವಿಧಾನ ಪರಿಷತ್ ಅಂಗೀಕರಿಸಿತು.
ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕಕ್ಕೆ ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆ ವಿಧಾನ ಪರಿಷತ್ ಅಂಗೀಕಾರ ನೀಡಿತು.
ವಿಧೇಯಕ ಮಂಡನೆ ಕಲಾಪದಲ್ಲಿ ತೋಟಗಾರಿಕಾ ಸಚಿವ ಆರ್.ಶಂಕರ್ ವಿಧೇಯಕ ಮಂಡಿಸಿದರು. ಕೇಂದ್ರ ಸರ್ಕಾರದ ಸೂಚನೆಯಂತೆ ವಿಧೇಯಕಕ್ಕೆ ತಿದ್ದುಪಡಿ ತರಲಾಗಿದೆ. 17 ಸದಸ್ಯರಲ್ಲಿ ಮೂರು ಸಂಖ್ಯೆ ಕಡಿಮೆ ಮಾಡಬೇಕಿದೆ. ಒಬ್ಬ ಶಾಸಕ, ಒಬ್ಬ ನಿರ್ದೇಶಕ ಮತ್ತು ಇಬ್ಬರು ರೈತ ಪ್ರತಿನಿಧಿ ಸಂಖ್ಯೆಯನ್ನು ಕಡಿಮೆ ಮಾಡಿ 14 ಸದಸ್ಯರಿಗೆ ಅವಕಾಶ ನೀಡುವ ತಿದ್ದುಪಡಿ ಮಾಡಿದ್ದು, ಐಸಿಆರ್ ನಿಯಮ ಪಾಲಿಸಿದ್ದೇವೆ. ಹಾಗಾಗಿ ವಿಧೇಯಕಕ್ಕೆ ಅಂಗೀಕಾರ ನೀಡುವಂತೆ ಮನವಿ ಮಾಡಿದರು.
ನಂತರ ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ರೈತ ಪ್ರತಿನಿಧಿ ಸಂಖ್ಯೆ ಕಡಿತ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿ ವಿಧೇಯಕವನ್ನು ವಿರೋಧಿಸಿ ರೈತ ವಿರೋಧಿ ಸರ್ಕಾರ ಎಂದು ಘೋಷಣೆ ಕೂಗುತ್ತಾ ಸಭಾತ್ಯಾಗ ಮಾಡಿದರು.
ಓದಿ: 21 ದಿನಗಳ ಪಾದಯಾತ್ರೆ ಮುಕ್ತಾಯ ..ಫೆ.7 ರಂದು ಕುರುಬರ ಬೃಹತ್ ಸಮಾವೇಶ
ಆದರೆ ಇದಕ್ಕೆ ತದ್ವಿರುದ್ದವಾಗಿ ಜೆಡಿಎಸ್ ಸದಸ್ಯರು ವಿಧೇಯಕಕ್ಕೆ ಬೆಂಬಲ ನೀಡಿ, ಐಸಿಆರ್ ನಿರ್ದೇಶನ ಒಪ್ಪಲೇಬೇಕು, ಯುಜಿಸಿ ಶಿಕ್ಷಣಕ್ಕೆ ಅನುದಾನ ಕೊಡುವ ರೀತಿ ತೋಟಗಾರಿಕೆ ವಿವಿಗೂ ಐಸಿಆರ್ ಅನುದಾನ ಕೊಡಲಿದೆ. ಹಾಗಾಗಿ ಇದನ್ನು ಒಪ್ಪಲೇಬೇಕು ಎಂದು ತಿದ್ದುಪಡಿ ವಿಧೇಯಕಕ್ಕೆ ಜೆಡಿಎಸ್ ಸಹಮತ ವ್ಯಕ್ತಪಡಿಸಿತು. ಬಳಿಕ ಧ್ವನಿ ಮತದ ಮೂಲಕ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿತು.
ಚರ್ಚೆ ಇಲ್ಲದೆ ವಿಧೇಯಕಕ್ಕೆ ಅಂಗೀಕಾರ: ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್ ಅಂಗೀಕಾರ ನೀಡಿದೆ. ಪರಿಷತ್ ಕಲಾಪದಲ್ಲಿ ವಿಧೇಯಕ ಮಂಡಿಸಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, 30 ದಿನ ಇದ್ದ ವೇತನ ಸಹಿತ ರಜೆ ಸಂಖ್ಯೆಯನ್ನು 45ಕ್ಕೆ ಹೆಚ್ಚಿಸಿದ್ದೇವೆ. ಈ ವರ್ಷ ಉಳಿಕೆಯಾಗುವ ರಜೆಗಳನ್ನು ಮುಂದಿನ ವರ್ಷಕ್ಕೆ ಮುಂದುವರಿಸಲು ಅವಕಾಶ ಕಲ್ಪಿಸಿ ತಿದ್ದುಪಡಿ ಮಾಡಲಾಗಿದೆ. ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಗುಜಾರಾತ್ನಲ್ಲಿ ಈಗಾಗಲೇ ಇಂತಹ ಕಾಯ್ದೆ ಇದೆ. ಹಾಗಾಗಿ ಇಲ್ಲಿಯೂ ತರುತ್ತಿದ್ದೇವೆ, ಅಂಗೀಕಾರ ನೀಡಿ ಎಂದು ಮನವಿ ಮಾಡಿದರು.
ತಿದ್ದುಪಡಿಗೆ ಯಾವುದೇ ಆಕ್ಷೇಪ ವ್ಯಕ್ತವಾಗದ ಹಿನ್ನೆಲೆಯಲ್ಲಿ ಯಾವುದೇ ಚರ್ಚೆ ಇಲ್ಲದೆ ವಿಧೇಯಕವನ್ನು ವಿಧಾನ ಪರಿಷತ್ ಅಂಗೀಕಾರ ಮಾಡಿದ್ದರಿಂದ ಮೇಜು ಕುಟ್ಟಿ ಬಿಜೆಪಿ ಸದಸ್ಯರು ಸ್ವಾಗತಿಸಿದರು.