ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟನ್ ಪೇಟೆ ಠಾಣೆಯಲ್ಲಿ ದಾಖಲಾದ (ಎಫ್ಐಆರ್) ಕೇಸ್ನ ಪ್ರಮುಖ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಸಿಸಿಬಿ ತನಿಖಾಧಿಕಾರಿಗಳಿಗೆ ಅವರನ್ನು ಪತ್ತೆಹಚ್ಚುವ ಸವಾಲು ಎದುರಾಗಿದೆ.
ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಆಪ್ತ ಶೇಖ್ ಫಾಜಿಲ್, ಆದಿತ್ಯಾ ಆಳ್ವ, ನಟಿ ರಾಗಿಣಿ-ಐದ್ರಿಂತಾರ ಸ್ನೇಹಿತ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ಸದ್ಯ ತಲೆ ಮರೆಸಿಕೊಂಡಿದ್ದಾರೆ. ಈ ಮೂವರು ಪ್ರಬಲ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ರೆ ಪ್ರಕರಣದ ಪ್ರಮುಖ ವಿಚಾರ ತಿಳಿದು ಬರಲಿದೆ. ಜೊತೆಗೆ ಹಲವಾರು ನಟ-ನಟಿಯರು, ರಾಜಾಕಾರಣಿಗಳ ಭವಿಷ್ಯ ನಿರ್ಧಾರವಾಗಲಿದೆ.
ಹೀಗಾಗಿ ಸಿಸಿಬಿಯ ಹಿರಿಯಾಧಿಕಾರಿಗಳು ಆರೋಪಿಗಳ ಪತ್ತೆಗೆ ಎಸಿಪಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿದ್ದಾರೆ. ಈ ತಂಡದಲ್ಲಿ 12 ಇನ್ಸ್ಪೆಕ್ಟರ್ಗಳು ಇದ್ದು, ಆರೋಪಿಗಳ ಕುಟುಂಬಸ್ಥರು, ಸ್ನೇಹಿತರ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ. ಬೆಂಗಳೂರು ಬಿಟ್ಟು ಹೊರ ಹೋಗಿರುವ ಗುಮಾನಿಯಿದ್ದು, ಒಂದು ತಂಡ ಹೊರಗಡೆ ತೆರಳಿ ಅಲ್ಲಿ ಕೂಡ ಶೋಧ ಮುಂದುವರೆಸಿದೆ. ಅಷ್ಟು ಮಾತ್ರವಲ್ಲದೆ ದೇಶ ಬಿಟ್ಟು ತೆರಳದಂತೆ ಲುಕ್ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ.
ಈ ಮೂವರು ಸಿಕ್ಕಿಬಿದ್ದರೆ ಹಲವು ಪ್ರಭಾವಿಗಳ ಮುಖವಾಡ ಬಯಲಾಗಲಿದೆ. ತಲೆಮರೆಸಿಕೊಂಡಿರುವ ಆರೋಪಿಗಳು ನಶೆ ಲೋಕದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಲವಾರು ಮಂದಿಗೆ ಡ್ರಗ್ಸ್ ಪೂರೈಕೆ ಹಾಗೂ ಸೇವನೆ ಮಾಡಲು ಪ್ರಚೋದನೆ ಮಾಡಿರುವ ಆರೋಪ ಇವರ ಮೇಲಿದೆ. ಸದ್ಯ ಸಿಸಿಬಿ ಪೊಲೀಸರು ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.