ಬೆಂಗಳೂರು: ಕಾವೇರಿ ನದಿ ಪಾತ್ರದಿಂದ ಈ ಬಾರಿ 273 ಟಿಎಂಸಿ ನೀರು ಸಮುದ್ರಕ್ಕೆ ಹರಿದು ಹೋಗಿದೆ. ಕಾವೇರಿ ನ್ಯಾಯಾಧೀಕರಣದ ತೀರ್ಪಿನ ಪ್ರಕಾರ ನಾವು ತಮಿಳುನಾಡಿಗೆ 177 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ, ಕಳೆದ ಜೂನ್ 1ರಿಂದ ಸೆಪ್ಟೆಂಬರ್ 28ರವರೆಗೆ 450.53 ಟಿಎಂಸಿಯಷ್ಟು ನೀರು ಹರಿದು ಹೋಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಲ್ಲಿ ತಮಿಳುನಾಡಿಗೆ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಹೋಗಿದ್ದು, ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಉಭಯ ರಾಜ್ಯಗಳಿಗೆ ಸಾಧ್ಯವಾಗುತ್ತಿಲ್ಲ. ತಮಿಳುನಾಡಿಗೆ ನೀಡಿದ ನಂತರ ಇರುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ನಾವು ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲು ಮುಂದಾಗಿದ್ದೇವೆ ಎಂದು ಹೇಳಿದರು.
ಟ್ಯಾಂಕರ್ ಮೂಲಕ ನೀರು ಪೂರೈಕೆ ಬಂದ್ : ಕಳೆದ ಮೂರು ವರ್ಷಗಳಿಂದ ಬಿದ್ದ ವ್ಯಾಪಕ ಮಳೆ ಮತ್ತು ಬೃಹತ್ ಜಲಾಶಯಗಳಿಂದ ಕೆರೆಗಳಿಗೆ ನೀರು ತುಂಬಿಸಿದ ಕೆಲಸದಿಂದ ರಾಜ್ಯದ ಯಾವುದೇ ಭಾಗದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಬಂದ್ ಆಗಿದೆ. ಟ್ಯಾಂಕರ್ ಮೂಲಕ ನೀರು ಹರಿಸುವುದಷ್ಟೇ ಅಲ್ಲ, ಶುದ್ಧ ಕುಡಿಯುವ ನೀರು ಲಭ್ಯವಾಗುತ್ತಿರುವುದರಿಂದ ಕರ್ನಾಟಕ ಪ್ಲೊರೈಡ್ ನೀರಿನಿಂದ ಮುಕ್ತವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಕಾವೇರಿ 'ತೀರ್ಥೋದ್ಭವ' ವಿಸ್ಮಯಕ್ಕೆ ಮುಹೂರ್ತ ನಿಗದಿ
ಕಳೆದ ಮೂರು ವರ್ಷಗಳಿಂದ ಬಿದ್ದ ವ್ಯಾಪಕ ಮಳೆಯಿಂದಾಗಿ ಜಲಾಶಯಗಳು ಮತ್ತು ಕೆರೆಗಳು ಭರ್ತಿಯಾಗಿದ್ದು, ಇದರಿಂದಾಗಿ ಅಂತರ್ಜಲ ಮಟ್ಟ ಶೇ.40ರಿಂದ 50 ರಷ್ಟು ಹೆಚ್ಚಿದೆ. ರಾಜ್ಯದ ಎಲ್ಲ ಕೊಳವೆ ಬಾವಿಗಳಲ್ಲಿ ಮೇಲುಮಟ್ಟದಲ್ಲೇ ಶುದ್ಧ ನೀರು ಲಭ್ಯವಾಗುತ್ತಿದೆ. ಇದೇ ಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಕಾಪಾಡಿಕೊಳ್ಳಬೇಕು ಎಂಬ ಕಾರಣದಿಂದ ನದಿ ಪಾತ್ರದಿಂದ ಎಲ್ಲ 17 ಸಾವಿರ ಕೆರೆಗಳನ್ನು ಭರ್ತಿ ಮಾಡುವ ಕೆಲಸ ಆರಂಭವಾಗಿದೆ ಎಂದರು.
1298 ಕೆರೆಗಳು ಭರ್ತಿ: ಸಣ್ಣ ನೀರಾವರಿ ಇಲಾಖೆ ಹೊರತುಪಡಿಸಿ ಬೃಹತ್ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಈ ಪ್ರಮಾಣದ ಕೆರೆಗಳಿದ್ದು, ಈ ಪೈಕಿ 1298 ಕೆರೆಗಳು ಈಗಾಗಲೇ ಭರ್ತಿಯಾಗಿವೆ. 3204 ಕೆರೆಗಳನ್ನು ಭರ್ತಿ ಮಾಡುವ ಕೆಲಸ ನಡೆಯುತ್ತಿದೆ. ಇದಕ್ಕಾಗಿ ಈಗಾಗಲೇ 11 ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಕೆರೆಗಳನ್ನು ಭರ್ತಿ ಮಾಡಲು ಆದ್ಯತೆ ನೀಡಲಾಗುತ್ತಿದೆ ಎಂದ ಅವರು, ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ದೂರವಾಗಿ, ರೈತನ ಬದುಕು ಹಸನಾಗುತ್ತದೆ ಎಂದು ಗೋವಿಂದ ಕಾರಜೋಳ ವಿವರಿಸಿದರು.
ರಾಜ್ಯದ ವಿವಿಧ ಜಲಾನಯನ ಪಾತ್ರದಲ್ಲಿ ಇನ್ನೂ 11 ಲಕ್ಷ ಹೆಕ್ಟೇರ್ನಷ್ಟು ಭೂಮಿಗೆ ನೀರು ಹರಿಸಬೇಕಾಗಿದೆ. ಮುಂದಿನ ಹತ್ತು ವರ್ಷಗಳಲ್ಲಿ ಸಂಪೂರ್ಣವಾಗಿ ನೀರಾವರಿ ಸೌಲಭ್ಯ ಒದಗಿಸುವ ಕೆಲಸವಾಗಲಿದೆ. ಬೃಹತ್ ಮತ್ತು ಸಣ್ಣನೀರಾವರಿ ಯೋಜನೆಯಡಿ ಒಟ್ಟಾರೆ 66 ಲಕ್ಷ ಹೆಕ್ಟೇರ್ ವ್ಯವಸಾಯ ಯೋಗ್ಯ ಭೂಮಿ ಇದ್ದು, ಇದರಲ್ಲಿ 54 ಲಕ್ಷ ಹೆಕ್ಟೇರ್ ಭೂಮಿಗೆ ನೀರು ಕೊಡಲು ಸಾಧ್ಯವಾಗಿದೆ. ಇದರಲ್ಲಿ ಕೃಷ್ಣಾ ನದಿ ಪಾತ್ರಕ್ಕೆ ಹೆಚ್ಚು ಭೂಮಿ ಇದೆ. ಕಾವೇರಿ ನದಿ ಪಾತ್ರದಲ್ಲಿ ಬಹುತೇಕ ಭೂಮಿ ನೀರಾವರಿಗೆ ಒಳಪಟ್ಟಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ರಾಜ್ಯದಲ್ಲಿ ಭರ್ಜರಿ ಮಳೆ: ತಮಿಳುನಾಡಿಗೆ ನಿಗದಿಗಿಂತ 4 ಪಟ್ಟು ಅಧಿಕ ಕಾವೇರಿ ನೀರು ಬಿಡುಗಡೆ