ಬೆಂಗಳೂರು: ಬರೋಬ್ಬರಿ 26,953 ಕೋಟಿ ರೂಪಾಯಿ ಹೆಚ್ಚುವರಿ ಮೊತ್ತದ ಪೂರಕ ಅಂದಾಜಿಗೆ ಧನವಿನಿಯೋಗ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಇದರೊಂದಿಗೆ 2.65 ಲಕ್ಷ ಕೋಟಿ ಗಾತ್ರದ ಮೂಲ ಬಜೆಟ್‌ಗೆ ಇನ್ನೂ 26,953.33 ಕೋಟಿ ರೂಪಾಯಿಗಳು ಹೆಚ್ಚುವರಿಯಾಗಿ ಸೇರ್ಪಡೆಯಾದಂತಾಗಿದೆ. ಮೊದಲ ಬಾರಿಗೆ ಬಜೆಟ್‌ಗೆ ಪೂರಕವಾದ ಅಂದಾಜು ಪಟ್ಟಿಯಲ್ಲಿ (ಸಪ್ಲಿಮೆಂಟರಿ ಬಜೆಟ್) ದೊಡ್ಡ ಪ್ರಮಾಣದ ಹಣವನ್ನು ಸೇರ್ಪಡೆ ಮಾಡಲಾಗಿದೆ.
ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಹೆಚ್ಚುವರಿಯಾಗಿ 1,500 ಕೋಟಿ : ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಈ ಮೊದಲು ನೀಡಿದ್ದ 5 ಸಾವಿರ ಕೋಟಿಗೆ ಹೆಚ್ಚುವರಿಯಾಗಿ ಇನ್ನೂ 1,500 ಕೋಟಿ ರೂಪಾಯಿಗಳನ್ನು, ಕಂದಾಯ ಇಲಾಖೆಗೆ (ಕೋವಿಡ್ ನಿರ್ವಹಣೆ ಸೇರಿ) ಹೆಚ್ಚುವರಿಯಾಗಿ 1325 ಕೋಟಿ ರೂಪಾಯಿ ಒದಗಿಸಲಾಗಿದೆ. ವಸತಿ ಇಲಾಖೆಗೆ ಮೊದಲು ನೀಡಿದ್ದಕ್ಕೆ ಹೆಚ್ಚುವರಿಯಾಗಿ 500 ಕೋಟಿ ರೂಪಾಯಿ, ನೌಕರರ ವೇತನ ಮತ್ತಿತರ ಭತ್ಯೆಗಳಿಗಾಗಿ 8 ಕೋಟಿ, ರೈತ ಮಕ್ಕಳ ಉನ್ನತ ಶಿಕ್ಷಣದ ಶಿಷ್ಯವೇತನಕ್ಕಾಗಿ 60 ಕೋಟಿ, ಸಣ್ಣ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ 15 ಕೋಟಿ ರೂ. ಪೂರಕ ಅಂದಾಜು ನೀಡಲಾಗಿದೆ.
ಪಿಎಂಜಿಎಸ್‌ವೈ ಯೋಜನೆಗೆ ಹೆಚ್ಚುವರಿಯಾಗಿ 333 ಕೋಟಿ : ಸಮಾಜ ಕಲ್ಯಾಣ ಇಲಾಖೆಗೆ ಮೊರಾರ್ಜಿ ಶಾಲೆಗಳ ನಿರ್ಮಾಣಕ್ಕಾಗಿ 34 ಕೋಟಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ 50 ಕೋಟಿ, ಸ್ವಯಂ ಉದ್ಯೋಗ ಮತ್ತು ಅರಿವು ಯೋಜನೆಗೆ 4 ಕೋಟಿ, ಪಿಎಂಜಿಎಸ್‌ವೈ ಯೋಜನೆಯಡಿ 333 ಕೋಟಿ, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಗೆ 50 ಕೋಟಿ, ರೈಲ್ವೆ ಭೂ ಸ್ವಾಧೀನ ಯೋಜನೆಗೆ 60 ಕೋಟಿ, ಸಾರಿಗೆಗೆ 200 ಕೋಟಿ, ಕಾರಾಗೃಹಗಳ ನಿರ್ಮಾಣಕ್ಕೆ 9 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 12 ಕೋಟಿ ರೂ. ಪೂರಕ ಅಂದಾಜು ಸೇರಿಸಲಾಗಿದೆ.
ತೆರಿಗೆದಾರನ ಹಣದಲ್ಲಿ ಸ್ವೇಚ್ಛಾಚಾರ ಮಾಡುವುದು ಬೇಡ : ಪೂರಕ ಅಂದಾಜುಗಳನ್ನು ಅಂಗೀಕರಿಸುವುದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ, ಈ ಕಷ್ಟಕಾಲದಲ್ಲಿ ತೆರಿಗೆದಾರನ ಹಣದಲ್ಲಿ ಸ್ವೇಚ್ಛಾಚಾರ ಮಾಡುವುದು ಬೇಡ, ಬಜೆಟ್ ಹಾಗೂ ಪೂರಕ ಬಜೆಟ್ ಹಣ ಎಚ್ಚರಿಕೆಯಿಂದ ಬಳಕೆಯಾಗಲಿ ಎಂದು ಸಲಹೆ ನೀಡಿದರು. ಪೂರಕ ಅಂದಾಜುಗಳು ಇಷ್ಟು ದೊಡ್ಡ ಮಟ್ಟದಲ್ಲಿ ಹೆಚ್ಚುವುದಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಬ್ಬರೂ ಕಾರಣ. ಅನಗತ್ಯ ಹುದ್ದೆಗಳು ಹಾಗೂ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕದೇ ಸಮಸ್ಯೆಯಾಗಿದೆ. 5 ಕೋಟಿಗಿಂತ ಕಡಿಮೆ ಮೊತ್ತದ ಅನುಪಯುಕ್ತವಾದ ಯೋಜನೆಗಳು ಎಷ್ಟೋ ವರ್ಷಗಳಿಂದ ಮುಂದುವರಿಯುತ್ತಿವೆ. ಅಂತಿಮವಾಗಿ ನಮ್ಮಿಂದ ತೊಂದರೆಯಾಗುತ್ತಿರುವುದು ತೆರಿಗೆದಾರನಿಗೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇಷ್ಟು ದೊಡ್ಡ ಮೊತ್ತದ ಪೂರಕ ಅಂದಾಜು ಮಂಡಿಸುತ್ತಿರುವುದು ಸರ್ಕಾರಕ್ಕೆ ಹೆಮ್ಮೆ : ಇದಕ್ಕೆ ಉತ್ತರಿಸಿದ ಸಿಎಂ, ಕೋವಿಡ್ ಮತ್ತು ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಎದುರಾದ ಕೊರತೆಯ ನಡುವೆಯೂ ಇಷ್ಟು ದೊಡ್ಡ ಮೊತ್ತದ ಪೂರಕ ಅಂದಾಜನ್ನು ಮಂಡಿಸಲಾಗುತ್ತಿರುವುದು ಸರ್ಕಾರಕ್ಕೆ ಹೆಮ್ಮೆ ಎಂದು ತಿಳಿಸಿದರು. ರಾಜ್ಯದ ಹಣಕಾಸಿನ ನಿರ್ಮಾಣ ಮಾಡುವಾಗ ಎರಡು ಅಂಶಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಬರಬೇಕಾದ ಆದಾಯವನ್ನು ಪರಿಪೂರ್ಣವಾಗಿ ಪಡೆಯುವಂತದ್ದು ಜವಾಬ್ದಾರಿ. ಬಂದ ಹಣವನ್ನು ನ್ಯಾಯ ಸಮ್ಮತವಾಗಿ ಖರ್ಚು ಮಾಡಬೇಕು. ಅನವಶ್ಯಕ ಖರ್ಚು ಕಡಿಮೆ ಮಾಡಬೇಕು. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಬದ್ಧ ವೆಚ್ಚದಲ್ಲಿ ಹಲವಾರು ವರ್ಷಗಳಿಂದ ಜಡ್ಡುಗಟ್ಟಿರುವ ಲೋಪ ದೋಷಗಳಿವೆ ಎಂದರು.
ಯಾವ್ಯಾವುದಕ್ಕೆ ಎಷ್ಟೆಷ್ಟು ಹೆಚ್ಚುವರಿ ಹಣ :
- ಹಾಲು ಉತ್ಪಾದಕರಿಗೆ ಸಹಾಯಧನದಡಿ ಬಿಲ್ಲು ಪಾವತಿಗೆ 200 ಕೋಟಿ ರೂ.
- ಹಾವೇರಿಯ ಯುಎಚ್‌ಟಿ ಹಾಲು ಪ್ಯಾಕಿಂಗ್ ಮತ್ತು ಸಂಸ್ಕರಣೆ ಘಟಕಕ್ಕೆ 15 ಕೋಟಿ ರೂ.
- ಅಬಕಾರಿ ಇಲಾಖೆಯ ವಾಹನಗಳ ದುರಸ್ತಿ ಮತ್ತು ಇಂಧನಕ್ಕೆ 1 ಕೋಟಿ ರೂ.
- ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳ ಇತರೆ ವೆಚ್ಚಕ್ಕೆ 11 ಕೋಟಿ ರೂ.
- ಸ್ವಾತಂತ್ರ್ಯ ಹೋರಾಟಗಾರರ ಪಿಂಚಣಿ, ನಿವೃತ್ತಿ ಸೌಲಭ್ಯಕ್ಕೆ 13.7 ಕೋಟಿ ರೂ.
- ಬಿಎಂಟಿಸಿಗೆ 433 ಕೋಟಿ ರೂ.
- ನೂತನ ಜೈಲುಗಳ ನಿರ್ಮಾಣಕ್ಕೆ 133 ಕೋಟಿ ರೂ.
- ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಮಾರ್ಟ್ ಫೋನ್, ಫೋನ್ ಭತ್ಯೆಗೆ 4.9 ಕೋಟಿ ರೂ.
- ದಿ ಕರ್ನಾಟಕ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನಿಂದ ಪಡೆದ ಸಾಲದ ಮರುಪಾವತಿಗೆ 669 ಕೋಟಿ ರೂ.
- ಡಾ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿವಿಗೆ ಮೂಲಭೂತ ಸೌಕರ್ಯಕ್ಕೆ 40 ಕೋಟಿ ರೂ.
- ಹಾವೇರಿ ನೂತನ ಜವಳಿ ಪಾರ್ಕ್ ಗೆ 10 ಕೋಟಿ ರೂ.
- ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಾಜ್ಯದ ಪಾಲು 500 ಕೋಟಿ ರೂ.
- ಬೆಳಗಾವಿ ಮಹಾನಗರ ಪಾಲಿಕೆ ವಿದ್ಯುತ್ ಬಿಲ್ ಪಾವತಿಗೆ 50 ಕೋಟಿ ರೂ.
- ಕೆರೆಗಳ ಆಧುನೀಕರಣ ಕಾಮಗಾರಿಗಳಿಗೆ 120 ಕೋಟಿ ರೂ.
- ಪಶ್ಚಿಮ ವಾಹಿನಿ ಯೋಜನೆಯ ಬಾಕಿ ಬಿಲ್ಲುಗಳಿಗೆ 10 ಕೋಟಿ ರೂ.
- ನೀರಾವರಿ ಪಂಪ್ ಸೆಟ್, ಕುಟೀರ ಭಾಗ್ಯ ಯೋಜನೆಗಳಡಿ ಸಹಾಯಧನಕ್ಕೆ 50 ಕೋಟಿ ರೂ.
- ಹಾವೇರಿಯ ಶಿಶುವಿನಹಾಳ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ 4 ಕೋಟಿ ರೂ.
- ಸ್ಪೀಕರ್ ಅವರ ಪ್ರಯಾಣ ವೆಚ್ಚ ಪಾವತಿಗೆ 7.5 ಲಕ್ಷ ರೂ.
- ವಿಧಾನಪರಿಷತ್ ಸಚಿವಾಲಯದ ವಿವಿಧ ವೆಚ್ಚಗಳಿಗೆ 1.3 ಕೋಟಿ ರೂ.