ಬೆಂಗಳೂರು: ವೈದ್ಯಕೀಯ ಭಾಷೆಯಲ್ಲಿ ಮ್ಯುಕೋರ್ಮೈಕೋಸಿಸ್ ಎಂದೇ ಕರೆಯಲಾಗುವ ಬ್ಲ್ಯಾಕ್ ಫಂಗಸ್ ಕೊರೊನಾ ಸೋಂಕಿಗಿಂತಲೂ ಮಾರಣಾಂತಿಕ ಎಂಬ ವಿಚಾರ ರಾಜ್ಯ ಸರ್ಕಾರ ಹೈಕೋರ್ಟ್ಗೆ ನೀಡಿರುವ ಅಂಕಿ ಅಂಶಗಳಲ್ಲಿ ಪತ್ತೆಯಾಗಿದೆ.
ಕೊರೊನಾ ಸೋಂಕು ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿನ ಅಂಕಿ ಅಂಶಗಳಲ್ಲಿ ಈ ಮಾಹಿತಿ ಕಂಡುಬಂದಿದೆ.
ಸರ್ಕಾರ ಹೈಕೋರ್ಟ್ಗೆ ಸಲ್ಲಿಸಿರುವ ಮಾಹಿತಿಯಂತೆ ರಾಜ್ಯದಲ್ಲಿ ಈವರೆಗೆ 2,817 ಮಂದಿಗೆ ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದೆ. ಇವರಲ್ಲಿ 2,304 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 179 ಮಂದಿ ಗುಣಮುಖರಾಗಿದ್ದಾರೆ. ಆದರೆ ಗುಣಮುಖರಾದವರ ಸಂಖ್ಯೆಗಿಂತ ಮೃತಪಟ್ಟವರ ಸಂಖ್ಯೆಯೇ ಹೆಚ್ಚಿದ್ದು, 217 ಮಂದಿ ಬ್ಲ್ಯಾಕ್ ಫಂಗಸ್ಗೆ ಬಲಿಯಾಗಿದ್ದಾರೆ. 117 ಮಂದಿ ಬ್ಲ್ಯಾಕ್ ಫಂಗಸ್ ಸೋಂಕಿತರು ವೈದ್ಯಕೀಯ ಸಲಹೆ (ಮೆಡಿಕಲ್ ಅಡ್ವೈಸ್) ಉಲ್ಲಂಘಿಸಿ ಮನೆಗೆ ತೆರಳಿದ್ದಾರೆ.
ನಿಯಂತ್ರಣಕ್ಕೆ ಕ್ರಮ..
ಹಿಂದಿನ ವಿಚಾರಣೆ ವೇಳೆ ಸರ್ಕಾರ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚಿಕಿತ್ಸೆಗೆ ಅಗತ್ಯವಿರುವ ಔಷಧ, ಲಸಿಕೆ, ಬೆಡ್ಗಳ ಸಂಖ್ಯೆ ಎಷ್ಟಿದೆ ಎಂದು ಮಾಹಿತಿ ಕೇಳಿತ್ತು. ಈ ಕುರಿತು ಮಾಹಿತಿ ನೀಡಿರುವ ಸರ್ಕಾರ ಸೋಂಕಿನ ಚಿಕಿತ್ಸೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಐಸಿಎಂಆರ್ ನೀಡಿರುವ ಚಿತಿತ್ಸಾ ವಿಧಾನಗಳ ಕುರಿತು ರಾಜ್ಯದ ಎಲ್ಲ ಆಸ್ಪತ್ರೆಗಳಿಗೆ ಸುತ್ತೋಲೆ ಮೂಲಕ ಮಾಹಿತಿ ನೀಡಲಾಗಿದೆ.
ಅಲ್ಲದೇ, ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಲಿನಿಕಲ್ ತಜ್ಞರ ಸಮಿತಿಯ ಪರಿಷ್ಕೃತ ಶಿಫಾರಸುಗಳನ್ನು ಕೂಡ ಸುತ್ತೋಲೆಯೊಂದಿಗೆ ತಲುಪಿಸಲಾಗಿದೆ. ಸೋಂಕಿತರಿಗೆ ಚಿಕಿತ್ಸೆಗೆ ನೀಡಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಗತ್ಯ ಸಂಖ್ಯೆಯ ಬೆಡ್ಗಳನ್ನು ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದೆ.