ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ಗಳ 243ಕ್ಕೆ ಹೆಚ್ಚಳ, ಮೇಯರ್-ಉಪ ಮೇಯರ್ ಅವಧಿ ವಿಸ್ತರಣೆ, ವಲಯಗಳ ಹೆಚ್ಚಳ, ಸ್ಥಾಯಿ ಸಮಿತಿಗಳ ಸದಸ್ಯರ ಏರಿಕೆ, ಈಗಿರುವ ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಒಂದು ಕಿ.ಮೀ ಸೇರ್ಪಡೆ ಸೇರಿದಂತೆ ಹಲವು ಅಂಶಗಳಿರುವ 2020ನೇ ಸಾಲಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕವನ್ನು ಇಂದು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯು ಶಿಫಾರಸು ಮಾಡಿದ್ದ 2020ನೇ ಸಾಲಿನ ಬಿಬಿಎಂಪಿ ವಿಧೇಯಕವನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರು ಮಂಡಿಸಿದರು.
ವಿಧಾನಸಭೆಯಲ್ಲಿ ಅಂಗೀಕೃತಗೊಂಡಿರುವ ವಿಧೇಯಕ ವಿಧಾನ ಪರಿಷತ್‍ನಲ್ಲಿ ಅಂಗೀಕಾರವಾದ್ರೆ ಬಿಬಿಎಂಪಿ ವ್ಯಾಪ್ತಿ ಇನ್ನು ಮುಂದೆ ಮತ್ತಷ್ಟು ವಿಸ್ತಾರವಾಗಲಿದೆ. ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಎಸ್.ರಘು ಅವರು ವಿಧಾನಸಭೆಯಲ್ಲಿ ಈ ವರದಿಯನ್ನು ನಿನ್ನೆ ಮಂಡಿಸಿದ್ದರು.
ಇನ್ನು ಮುಂದೆ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ಅಸ್ತಿತ್ವಕ್ಕೆ ಬರಲಿದೆ. ಪ್ರಸ್ತುತ ಇರುವ 198 ವಾರ್ಡ್ಗಳಿಂದ 243 ವಾರ್ಡ್ಗಳು ಹೆಚ್ಚಳವಾಗಲಿದೆ. ಬಿಬಿಎಂಪಿ ವ್ಯಾಪ್ತಿಯಿಂದ ಒಂದು ಕಿ.ಮೀ ಹೊರಗೆ ಇರುವ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆಗಳನ್ನು ಸಹ ಈ ವ್ಯಾಪ್ತಿಗೆ ಸೇರ್ಪಡೆಯಾಗಲಿವೆ.
ಕ್ಷೇತ್ರಗಳ ಪುನರ್ ವಿಂಗಡಣೆಯನ್ನು ಆಯಾ ವಿಧಾನಸಭಾ ಕ್ಷೇತ್ರಗಳಿಗೆ ಅಧಿಕಾರ ನೀಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು, ಗಾತ್ರವೂ ಕೂಡ ವಿಸ್ತಾರವಾಗುತ್ತಿದೆ. ಹೀಗಾಗಿ ಜನರಿಗೆ ಉತ್ತಮ ಆಡಳಿತ ನೀಡುವ ಕಾರಣಕ್ಕಾಗಿ ವಾರ್ಡ್ ಸಂಖ್ಯೆ ಹೆಚ್ಚಳ ಮಾಡಲಾಗಿದೆ.
ಕೆಲವು ಶಾಸಕರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಂದು ಕಿ.ಮೀ. ಹೊರಗೆ ಗ್ರಾಮಗಳಿದ್ದು, ಅವುಗಳನ್ನೂ ಸಹ ಬಿಬಿಎಂಪಿಗೆ ಸೇರ್ಪಡೆ ಮಾಡಬೇಕೆಂಬ ಪ್ರಸ್ತಾವನೆಯನ್ನು ಇಟ್ಟಿದ್ದಾರೆ. ಇದನ್ನು ಕೂಡ ಸೇರ್ಪಡೆ ಮಾಡುವುದಾಗಿ ಹೇಳಿದರು.
ಇನ್ನು ಮುಂದೆ ರಾಜ್ಯಸಭೆ, ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ ಹಾಗೂ ಪಾಲಿಕೆ ಸೇರಿದಂತೆ ಸದಸ್ಯರು ಇನ್ನು ಮುಂದೆ ಎರಡು ಸದನಗಳಿಗೆ ಸದಸ್ಯರಾಗುವಂತಿಲ್ಲ. ಆರು ತಿಂಗಳೊಳಗೆ ಯಾವುದಾದರೊಂದು ಸದನದ ಸದಸ್ಯರಾಗಬೇಕು. ಆರು ತಿಂಗಳೊಳಗೆ ತಮಗೆ ಬೇಕಾದ ಸದನವನ್ನು ಅವರೇ ಸೆಕ್ಷನ್ 48ರ ಅಡಿ ಆಯ್ಕೆ ಮಾಡಿಕೊಳ್ಳಲು ಅವರಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.
18 ವಲಯಗಳಿಗೆ ಹೆಚ್ಚಳ : ಬಿಬಿಎಂಪಿಗೆ ಇದುವರೆಗೆ 8 ವಲಯಗಳಿದ್ದವು. ಇದನ್ನು ಈಗ 18 ವಲಯಗಳಿಗೆ ಹೆಚ್ಚಳ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಶಾಸಕರೇ ಸಮಿತಿಯ ಅಧ್ಯಕ್ಷರಾಗುವ ಅವಕಾಶ ಕಲ್ಪಿಸಲಾಗಿದೆ. ವಲಯಗಳಿಗೆ ಆಯುಕ್ತರ ಜತೆ ಸರ್ಕಾರದ ಮಟ್ಟದಲ್ಲಿರುವ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮಾದರಿಯಲ್ಲಿ ಓರ್ವ ಅಧಿಕಾರಿಯನ್ನು ನೇಮಕ ಮಾಡಲಾಗುವುದು.
ಆಯಾ ವಲಯಗಳಲ್ಲಿ ಸಮಸ್ಯೆಗಳನ್ನು ಚರ್ಚೆ ಮಾಡಿ ಪಾಲಿಕೆಗೆ ಕಳುಹಿಸಿ ಕೊಡಬೇಕು. ಜತೆಗೆ ಪ್ರತಿ ವಲಯಕ್ಕೂ ಒಂದೊಂದು ಕಾನೂನು ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ತಿಳಿಸಿದರು. ಇನ್ನು ಪಾಲಿಕೆಯು ಸೆಕ್ಷನ್ 157ರ ಅಡಿ ಜಾಹೀರಾತು ಮತ್ತು ಮನರಂಜನಾ ತೆರಿಗೆ ವಿಧಿಸಬಹುದಾಗಿದೆ. ಕೋವಿಡ್-19ನಿಂದ ಪಾಲಿಕೆಗೆ ತೆರಿಗೆ ಬರುತ್ತಿರಲಿಲ್ಲ.
ಹೀಗಾಗಿ ಪಾಲಿಕೆಯೇ ತೆರಿಗೆಯನ್ನು ವಿಧಿಸಬಹುದು. 60/40 ಮೇಲ್ಪಟ್ಟ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳುವವರು ಕಡ್ಡಾಯವಾಗಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಬೇಕು. ಅಲ್ಲದೆ, ಅಪಾಯಕಾರಿ ಗಣಿಯನ್ನು ಸಹ ಗುರುತಿಸಬೇಕು. ಆಯಾ ವಲಯಗಳಲ್ಲಿ ವಿಪತ್ತು ನಿರ್ವಹಣೆಯನ್ನು ಪಾಲಿಕೆಯವರೆ ಮಾಡಿಕೊಳ್ಳಬೇಕು.
ಮೇಯರ್, ಉಪಮೇಯರ್ ಅಧಿಕಾರ 30 ತಿಂಗಳು : ಈವರೆಗೆ ಮೇಯರ್ ಹಾಗೂ ಉಪಮೇಯರ್ ಅಧಿಕಾರವಧಿ 12 ತಿಂಗಳಿಗೆ ಮಾತ್ರ ಸೀಮಿತವಾಗಿತ್ತು. ಜಿಲ್ಲಾ ಪಂಚಾಯತ್ ಅಧ್ಯಕ್ಷರ ಮಾದರಿಯಲ್ಲೇ ಇನ್ನು ಮುಂದೆ ಮೇಯರ್ ಮತ್ತು ಉಪ ಮೇಯರ್ ಅಧಿಕಾರ ಅವಧಿ 30 ತಿಂಗಳು ಇರುತ್ತದೆ ಎಂದು ಮಾಹಿತಿ ನೀಡಿದರು.
ಜನಸಂಖ್ಯೆ ಹಾಗೂ ಬೆಂಗಳೂರು ನಗರ ಬೆಳೆಯುತ್ತಿರುವ ವೇಗವನ್ನು ಗಮದಲ್ಲಿಟ್ಟುಕೊಂಡು ಈ ಕಾಯ್ದೆ ರಚಿಸಲಾಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡಲು ಅನುಕೂಲವಾಗುತ್ತದೆ ಎಂದರು. ವಿಧೇಯಕದ ಕುರಿತು ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಕೆಲವು ಕಡೆ ನಾಮ ನಿರ್ದೇಶಿತ ಸದಸ್ಯರು ಎರಡೆರಡು ಕಡೆ ವಿಳಾಸ ಹೊಂದಿರುತ್ತಾರೆ.
ಕಳೆದ ಬಾರಿ ನಮ್ಮ ಪಕ್ಷಕ್ಕೆ ಬಹುಮತ ಬಂದರೂ ಕೊನೆ ಕ್ಷಣದಲ್ಲಿ ಬೇರೆ ಬೇರೆಯವರು ಬೆಂಗಳೂರಿನ ವಿಳಾಸ ಕೊಟ್ಟು ಮತದಾನದ ಹಕ್ಕು ಪಡೆದರು. ಇದರಿಂದಾಗಿ ನಾವು ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಇನ್ನು ಮುಂದೆ ಒಬ್ಬ ಸದಸ್ಯ ಒಂದೇ ಸ್ಥಳದಲ್ಲಿ ವಿಳಾಸ ಹೊಂದುವಂತೆ ನಿಯಮ ರೂಪಿಸಬೇಕೆಂದು ಅವರು ಸಲಹೆ ನೀಡಿದರು. ಜತೆಗೆ ಕೆಲವು ವಾರ್ಡ್‌ಗಳಲ್ಲಿ ಜನಸಂಖ್ಯೆ ವ್ಯತ್ಯಾಸವಾಗಿದ್ದು, ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು.
ಓದಿ: ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆ-2020ಕ್ಕೆ ವಿಧಾನಸಭೆ ಒಪ್ಪಿಗೆ
ಕ್ಷೇತ್ರ ಸಮಾಲೋಚನಾ ಸಮಿತಿ ಸದಸ್ಯರಾಗಿ ಶಾಸಕರೇ ಅಧ್ಯಕ್ಷರಾಗಿರ್ತಾರೆ. ಆ ವಿಧಾನಸಭೆ ಕ್ಷೇತ್ರದ ಕಾರ್ಪೊರೇಟ್ ಹಾಗೂ ನಾಮ ನಿರ್ದೇಶಿತ ಸದಸ್ಯರು ಸದಸ್ಯರಾಗಿರುತ್ತಾರೆ ಎಂದು ಹೇಳಿದ್ದಾರೆ. ಅಧಿಕಾರಿಗಳನ್ನೂ ಇದಕ್ಕೆ ಸದಸ್ಯರನ್ನಾಗಿ ಮಾಡಬೇಕು. ಇಲ್ಲದಿದ್ರೆ ಸಲಹಾ ಸಮಿತಿ ಆಗುತ್ತದೆ. ಝೋನಲ್ ಕಮಿಷನರ್ ಕೂಡ ಸಮಿತಿಯಲ್ಲಿರಬೇಕು. ಕಸದಿಂದಲೂ ಆದಾಯ ಮಾಡಿಕೊಳ್ಳಲು ಅವಕಾಶವಿದೆ.
ಅದನ್ನು ಯೋಚಿಸಬೇಕು. ಪಿಪಿಪಿ ಮಾದರಿಯಲ್ಲಿ ಕಂಪನಿಗಳ ಸಿಎಸ್‍ಆರ್ ಹಣ ಬಳಸಿ ಕೆಲವು ಯೋಜನೆ ಕಾರ್ಯಗತಗೊಳಿಸಬೇಕು. ಅನೇಕರು ಮುಂದೆ ಬಂದರೂ ಅವಕಾಶ ಸಿಗುವುದಿಲ್ಲ. ಇವೆಲ್ಲವನ್ನೂ ಈ ಬಿಲ್‍ನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಾಸಕ ಮುನಿರತ್ನ ಅವರು ಮಾತನಾಡಿ, ಕೆಲವು ಕಡೆ ರಸ್ತೆಗಳು ಕಿರಿದಾಗಿವೆ. ನನ್ನ ಕ್ಷೇತ್ರವಾದ ಆರ್.ಆರ್.ನಗರ 45 ಸಾವಿರ ಕಿ.ಮೀ. ಚದರ ಅಡಿ ಇದೆ.
ಒಂದು ವಾರ್ಡ್‌ನಲ್ಲಿ 20 ಸಾವಿರ ಜನಸಂಖ್ಯೆ ಇದ್ರೆ, ಮತ್ತೊಂದು ವಾರ್ಡ್‌ನಲ್ಲಿ 70 ಸಾವಿರ ಜನರಿದ್ದಾರೆ. ಕೆಲವು ಕಡೆ ರಸ್ತೆಗಳ ಅಗಲೀಕರಣದ ಅಗತ್ಯವಿದೆ. ಇದನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು. ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಝೋನಲ್ ಸಮಿತಿ ಸಂಖ್ಯೆ ಕಡಿಮೆ ಮಾಡಿ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.
ನಂತರ ಸಚಿವ ಮಾಧುಸ್ವಾಮಿ ಮಾತನಾಡಿ, ಜನಸಂಖ್ಯೆ ಒಂದು ವಾರ್ಡನಲ್ಲಿ 27 ಸಾವಿರ ಇದ್ದರೆ, ಇನ್ನೊಂದು ವಾರ್ಡ್‌ನಲ್ಲಿ 70 ಸಾವಿರ ಇದ್ದಾರೆ. ರಸ್ತೆ ಅಗಲೀಕರಣ ಮಾಡಬೇಕಿದೆ. ಬೆಂಗಳೂರು ಪಶ್ಚಿಮ ಭಾಗದ ಅಭಿವೃದ್ಧಿ ಆಗಬೇಕಿದೆ. 1901 ರಲ್ಲಿ 45 ಚ.ಕಿ.ಮೀ. 1.65 ಲಕ್ಷ ಜನಸಂಖ್ಯೆ ಇತ್ತು. ಇವತ್ತು 1 ಕೋಟಿ ಜನರಿದ್ದಾರೆ. ಈ ವಿಧೇಯಕದಿಂದ ಬೆಂಗಳೂರಿನ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.