ಬೆಂಗಳೂರು: ಸೆಮಿಕಂಡಕ್ಟರ್ ವಲಯದಲ್ಲಿರುವ 2 ಟ್ರಿಲಿಯನ್ ಡಾಲರ್ ಮೌಲ್ಯದ ಅವಕಾಶಗಳನ್ನು ಭಾರತವು ತನ್ನದಾಗಿಸಿಕೊಳ್ಳಲು ಆದ್ಯತೆಯ ಮೇರೆಗೆ 2 ಶತಕೋಟಿ ಡಾಲರ್ ಹಣವನ್ನು ವಿನಿಯೋಗಿಸುವ ಅವಶ್ಯಕತೆಯಿದೆ ಎಂದು ದೆಹಲಿಯ ಐಐಟಿ ಸಂಸ್ಥೆಯ ಪ್ರೊ.ವಿ. ರಾಮಗೋಪಾಲ್ ರಾವ್ ಪ್ರತಿಪಾದಿಸಿದರು.
ರಾಜಧಾನಿಯಲ್ಲಿ ವರ್ಚುವಲ್ ಮೋಡ್ ಮುಖಾಂತರ ನಡೆಯುತ್ತಿರುವ ಬೆಂಗಳೂರು-ಇಂಡಿಯಾ ನ್ಯಾನೋ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಸೆಮಿಕಂಡಕ್ಟರ್ ಕಾರ್ಯಪರಿಸರದ ಮೂಲಕ ಭಾರತದ ಉತ್ಪಾದನಾ ವಲಯಕ್ಕೆ ಉತ್ತೇಜನ' ವಿಚಾರ ಕುರಿತು ತಮ್ಮ ಚಿಂತನೆಗಳನ್ನು ಹಂಚಿಕೊಂಡರು.
ಭಾರತದಲ್ಲಿ ಸದ್ಯಕ್ಕೆ ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮದ ನಡುವೆ ಕಂದಕವಿದೆ. ಇದನ್ನು ಆದಷ್ಟು ಬೇಗ ಮುಚ್ಚಬೇಕು. ನ್ಯಾನೋ ತಂತ್ರಜ್ಞಾನದ ವಲಯದಲ್ಲಿ ಸಾವಿರಾರು ನವೋದ್ಯಮಗಳು ಅಸ್ತಿತ್ವಕ್ಕೆ ಬರುತ್ತಿದ್ದು, ದೇಶದಲ್ಲಿ ಈ ವಲಯಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಸಂಖ್ಯೆಯಲ್ಲಿ ಉತ್ಕೃಷ್ಟತಾ ಕೇಂದ್ರಗಳು ಬರಬೇಕಿದೆ ಎಂದರು.
ಇದನ್ನೂ ಓದಿ:ಮಹಿಳಾ ದಿನದಂದೇ ಅಮೃತಧಾರೆ ಎದೆಹಾಲು ಬ್ಯಾಂಕ್ಗೆ ಚಾಲನೆ
ಪೇಟೆಂಟ್ ಸಂಸ್ಕೃತಿಗೂ ಒತ್ತು ಕೊಡಬೇಕು: ದೇಶದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಕೊಡುತ್ತಿರುವಷ್ಟೇ ಒತ್ತನ್ನು ಪೇಟೆಂಟ್ ಸಂಸ್ಕೃತಿಗೂ ಕೊಡಬೇಕು. ಇದರಿಂದಾಗಿ ನ್ಯಾನೋ ತಂತ್ರಜ್ಞಾನದ ಶಕ್ತಿ-ಸಾಮರ್ಥ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸೂಕ್ತ ಕಾರ್ಯಪರಿಸರವನ್ನು ಸೃಷ್ಟಿಸಬಹುದು. ಮಾರುತಿ ಸುಜುಕಿ ಕಂಪನಿಯು ಸೆಮಿಕಂಡಕ್ಟರ್ ವಲಯದಲ್ಲಿ ಮಾಡಿರುವ ಸಾಧನೆ ಗಮನಾರ್ಹವಾಗಿದ್ದು, ಮೇಲ್ಪಂಕ್ತಿಯಂತಿದೆ ಎಂದು ರಾವ್ ಶ್ಲಾಘಿಸಿದರು.
ನ್ಯಾನೋ ತಂತ್ರಜ್ಞಾನದಲ್ಲಿ ಭಾರತಕ್ಕೆ 5ನೇ ಸ್ಥಾನ: ನ್ಯಾನೋ ವಿದ್ಯುನ್ಮಾನ ಸಂಶೋಧನೆಯಲ್ಲಿ ಭಾರತವು ಜಗತ್ತಿನಲ್ಲಿ 5ನೇ ಸ್ಥಾನದಲ್ಲಿದ್ದು, 7 ಸಂಸ್ಥೆಗಳು ಈ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿವೆ. ಕೃಷಿ, ಆರೋಗ್ಯ ಸೇವೆಗಳು ಮತ್ತು ಆಟೋಮೋಟೀವ್ ವಲಯಗಳು ನ್ಯಾನೋ ತಂತ್ರಜ್ಞಾನವನ್ನು ಅಗಾಧ ಪ್ರಮಾಣದಲ್ಲಿ ಅಳವಡಿಸಿಕೊಳ್ಳಬಹುದು. ಒಟ್ಟಾರೆಯಾಗಿ ಈ ತಂತ್ರಜ್ಞಾನದ ಬಳಕೆಯಲ್ಲಿ ಭಾರತವು ಅಮೆರಿಕ ಮತ್ತು ಚೀನಾಗಳ ನಂತರದಲ್ಲಿ 3ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ನ್ಯಾನೋ ತಂತ್ರಜ್ಞಾನದಿಂದ 100 ಕೋಟಿ ಜನರಿಗೆ ಉಪಯೋಗ: ನ್ಯಾನೋ ತಂತ್ರಜ್ಞಾನವು 100 ಕೋಟಿ ದೇಶವಾಸಿಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ವ್ಯಾಪಕವಾಗಲಿದ್ದು, ಪ್ರತಿಯೊಂದು ಕ್ಷೇತ್ರವನ್ನೂ ಆಳಲಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.
ನ್ಯಾನೋ ದೊಡ್ಡಶಕ್ತಿಯಾಗಿ ಹೊರಹೊಮ್ಮಲಿದೆ: ಸ್ಯಾಮ್ಸಂಗ್ ಇಂಡಿಯಾದ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಬಾಲಾಜಿ ಶೌರಿರಾಜನ್ ಮಾತನಾಡಿ, 3ಡಿ ವಿಡಿಯೋ, ಗೇಮಿಂಗ್ ತಂತ್ರಜ್ಞಾನ ಮತ್ತು 5ಜಿ ತಂತ್ರಜ್ಞಾನಗಳು ಇಂದು ಜಗತ್ತನ್ನು ಬೆಸೆಯುತ್ತಿವೆ. ನ್ಯಾನೋ ತಂತ್ರಜ್ಞಾನದಿಂದಾಗಿ ಮಿಂಚಿನ ಗತಿಯಲ್ಲಿ ಸಂವಹನ ಸಂಭವಿಸುತ್ತಿದೆ. ಮೇಕ್ ಇನ್ ಇಂಡಿಯಾ ಯೋಜನೆಯಿಂದಾಗಿ ಇಂದು ನೂರಾರು ಕಂಪನಿಗಳು ಭಾರತದಲ್ಲೇ ನೆಲೆಯೂರಿವೆ. ಇದರಿಂದಾಗಿ ರಾಷ್ಟ್ರವು ಸಂಶೋಧನೆಯ ಕ್ಷೇತ್ರದಲ್ಲಿ ದೊಡ್ಡಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಅವರು ಅಭಿಪ್ರಾಯಪಟ್ಟರು.