ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದ 16ನೇ ಮುನ್ಸಿಪಾಲಿಕಾ ಸಮ್ಮೇಳನಕ್ಕೆ ಇಂದು (ಫೆ.14) ತೆರೆ ಬಿದ್ದಿದೆ. ಸ್ಮಾರ್ಟ್ ಹಾಗೂ ಸುಸ್ಥಿರ ನಗರಗಳಿಗೆ ತಂತ್ರಜ್ಞಾನದ ಮೂಲಕ ಪರಿಹಾರ ನೀಡುವ ನಿಟ್ಟಿನಲ್ಲಿ ನಗರದ ಅರಮನೆ ಮೈದಾನದಲ್ಲಿ ಖಾಸಗಿ ಹಾಗೂ ಸರ್ಕಾರಿ ಸ್ಥಳೀಯ ಸಂಸ್ಥೆಗಳು ಈ ಪ್ರದರ್ಶನ ಹಮ್ಮಿಕೊಂಡಿದ್ದವು.
ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಪ್ರತಿನಿಧಿಗಳನ್ನೊಳಗೊಂಡ ಚರ್ಚೆ- ಸಂವಾದವೂ ಸಮ್ಮೇಳನದ ಕೇಂದ್ರ ಬಿಂದುವಾಗಿತ್ತು. ಸಾವಿರಾರು ಜನ ಸಮ್ಮೇಳನಕ್ಕೆ ಭೇಟಿ, ಪ್ರದರ್ಶನಗಳನ್ನು ಕಣ್ತುಂಬಿಕೊಂಡರು.
ನೀರಿನ ಬಳಕೆಯ ವಿಧಾನ, ಮರುಬಳಕೆ, ಪರಿಸರ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಶೌಚಾಲಯ, ನೂತನ ತಂತ್ರಜ್ಞಾನದ ಮನೆ, ಸಿಮೆಂಟ್, ಟೈಲ್ಸ್, ಗೋಡೆಗಳ ಪ್ರದರ್ಶನವೂ ಜನರ ಕುತೂಹಲಕ್ಕೆ ಕಾರಣವಾಗಿದ್ದವು.
ನಗರದ ಸಮಸ್ಯೆಗಳಿಗೆ ಪರಿಹಾರ ಕೊಡಲು ಸಾಕಷ್ಟು ಸಂಸ್ಥೆಗಳು ಮುಂದೆ ಬಂದಿವೆ. ಸರ್ಕಾರಿ, ಖಾಸಗಿ ಸಂಸ್ಥೆಗಳು ಸಾಕಷ್ಟು ಪ್ರದರ್ಶನಗಳನ್ನು ಏರ್ಪಡಿಸಿವೆ. ಟ್ರಾಫಿಕ್, ತ್ಯಾಜ್ಯಕ್ಕೆ ಪರಿಹಾರಗಳಿವೆ. ಸರ್ಕಾರ ಇವುಗಳನ್ನು ಅನುಷ್ಠಾನಕ್ಕೆ ತರಬೇಕಿದೆ ಎಂದು ಸಮ್ಮೇಳನಕ್ಕೆ ಭೇಟಿ ನೀಡಿದ ಸಿಂಧೂ ಅಭಿಪ್ರಾಯಪಟ್ಟರು.
ತಂತ್ರಜ್ಞಾನಗಳಲ್ಲಿ ಸಾಕಷ್ಟು ಸಂಶೋಧನೆ ನಡೆದಿದೆ. ಅದರಿಂದ ನೂತನ ಮಾದರಿಯ ಯಂತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಜನರು ಇದನ್ನು ಅಳವಡಿಸಿಕೊಳ್ಳಬೇಕು. ಪರಿಸರ ರಕ್ಷಣೆ ಮೊದಲ ಆದ್ಯತೆಯಾಗಬೇಕು. ಸ್ಮಾರ್ಟ್ ಸಿಟಿಯನ್ನು ಸರ್ಕಾರ ಮುಂದುವರಿಸಲು ಸಾಧ್ಯವಿದೆ ಎಂದು ಎಂಜಿನಿಯರ್ ಕಾಲೇಜಿನ ಪ್ರೊ.ಸಂಜಯ್ ಗುಪ್ತ ಹೇಳಿದರು.