ಮಂಗಳೂರು: ಮದುವೆ ಕಾರ್ಯಕ್ರಮಕ್ಕೆ ಬಟ್ಟೆಬರೆ ಹಾಗೂ ಚಿನ್ನಾಭರಣ ಖರೀದಿಗೆ ತೆಗೆದಿರಿಸಿದ್ದ ಹಣವನ್ನು ಕೊಂಡೊಯ್ಯುತ್ತಿದ್ದ ವೇಳೆ ಗಮನ ಬೇರೆಡೆ ಸೆಳೆದು ಹಣದ ಬ್ಯಾಗಿನೊಂದಿಗೆ ಮೂವರು ದುಷ್ಕರ್ಮಿಗಳು ಪರಾರಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಬ್ದುಲ್ ಸಲಾಮ್ ಎಂಬವರು ತನ್ನ ಅಕ್ಕನ ಮಗಳ ಮದುವೆಗೆ 16,20,000 ಹಣವನ್ನು ಸಂಗ್ರಹಣೆ ಮಾಡಿದ್ದರು. ಫೆಬ್ರವರಿ 22ರಂದು ಚಿನ್ನಾಭರಣ ಮತ್ತು ಬಟ್ಟೆಬರೆ ಖರೀದಿಗೆ ಹಣದ ಕಟ್ಟಿನೊಂದಿಗೆ ಗೆಳೆಯ ಮುತಾಲಿಬ್ ಅವರ ಮನೆಗೆ ಹೊರಟಿದ್ದರು.
ಹಣವನ್ನು ಬ್ಯಾಗ್ನಲ್ಲಿ ಹಾಕಿ ಸ್ಕೂಟರ್ ಮುಂಭಾಗದ ಹುಕ್ಸ್ನಲ್ಲಿಟ್ಟು ಹೋಗುತ್ತಿದ್ದ ಇವರನ್ನು ಮಂಗಳೂರಿನ ಪಾಂಡೇಶ್ವರದ ಓಲ್ಡ್ ಕೆಂಟ್ ರಸ್ತೆಯಲ್ಲಿ ಹಿಂದಿನಿಂದ ಸ್ಕೂಟರ್ನಲ್ಲಿ ಬಂದ ಮೂವರು ನಿಮ್ಮ ಹಣದ ಕಟ್ಟು ಬಿದ್ದಿದೆ ಎಂದು ಹೇಳಿದ್ದಾರೆ.
ಇದರಿಂದ ಗಲಿಬಿಲಿಗೊಂಡ ಸಲಾಂ ಅವರು ಸ್ಕೂಟರ್ನಿಂದ ಇಳಿದು ಹಣದ ಕಟ್ಟು ಬಿದ್ದಿದೆಯೇ ಎಂದು ರಸ್ತೆ ಕಡೆಗೆ ನೋಡುತ್ತಿದ್ದಾಗ ಅಪರಿಚಿತ ಮೂವರು ಸ್ಕೂಟರ್ನಿಂದ 16,20,000 ಹಣದ ಕಟ್ಟನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಸಲಾಂ ಅವರು ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದ್ದಾರೆ.