ಬೆಂಗಳೂರು: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವನ್ನು 150 ಕೋಟಿ ರೂ. ವೆಚ್ಚದಲ್ಲಿ ವಿಶ್ವದರ್ಜೆಯ ಕ್ಯಾಂಪಸ್ ಆಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಅಭಿವೃದ್ಧಿ ಕುರಿತ ಪರಿಶೀಲನಾ ಸಭೆಯಲ್ಲಿ ಅವರು ಇಂದು ಪಾಲ್ಗೊಂಡರು. ಕುಲಪತಿ ಪ್ರೊ. ಎಸ್. ಜಾಫೆಟ್ ನೇತೃತ್ವದ ತಂಡ ಪ್ರಸ್ತುತ ಪಡಿಸಿದ ಬೆಂಗಳೂರು ಸೆಂಟ್ರಲ್ ವಿವಿಯ ಅಭಿವೃದ್ಧಿ ಕಾರ್ಯಗಳ ಕುರಿತ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ, ವಿಶ್ವದರ್ಜೆಯ ಕ್ಯಾಂಪಸ್ ನಿರ್ಮಾಣದ ಕುರಿತು ಹಲವಾರು ಸಲಹೆಗಳನ್ನು ನೀಡಿದರು.
ಆದಷ್ಟು ಬೇಗ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗುವುದು. 31 ಎಕರೆ ಜಾಗ ಇದ್ದು, ಅಲ್ಲಿ ಶೈಕ್ಷಣಿಕ ಹಾಗೂ ಕ್ರೀಡಾ ಸಮುಚ್ಚಯಗಳ ನಿರ್ಮಾಣ ಮಾಡಲಾಗುವುದು. ಮೊದಲ ಹಂತದಲ್ಲಿ ಅಭಿವೃದ್ಧಿ ಪಡಿಸಲಾಗುವ ಶೈಕ್ಷಣಿಕ ಘಟಕ, ಐತಿಹಾಸಿಕ ಕಟ್ಟಡಗಳ ನವೀಕರಣಕ್ಕೆ 100 ಕೋಟಿ ರೂ. ಹಾಗೂ ಕ್ರೀಡಾ ಸೌಲಭ್ಯಕ್ಕೆ 50 ಕೋಟಿ ರೂ. ಮೀಸಲಿಡಲಾಗುವುದು. 18 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಸದ್ಯ ವಿಶ್ವವಿದ್ಯಾಲಯದಲ್ಲಿ 800 ವಿದ್ಯಾರ್ಥಿಗಳಿದ್ದು, ಹಲವು ಹೊಸ ಕೋರ್ಸ್‌ಗಳು ಆರಂಭಿಸಲಾಗುವುದು. ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಒಳಗೊಂಡ ಇಂಟಿಗ್ರೇಟೆಡ್ ಕೋರ್ಸ್‌ಗಳನ್ನು ಪರಿಚಯಿಸಲಾಗುವುದು. ಒಟ್ಟು 50,000 ವಿದ್ಯಾರ್ಥಿಗಳು ಓದಲು ಅನುಕೂಲವಾಗುವಂತಹ ವ್ಯವಸ್ಥೆ ಕಲ್ಪಿಸಲು ಸೂಚಿಸಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಕ್ರೀಡಾ ಸೌಕರ್ಯ:
ಶಿಕ್ಷಣದಷ್ಟೇ ಕ್ರೀಡೆಗೂ ವಿಶ್ವವಿದ್ಯಾಲಯದಲ್ಲಿ ಒತ್ತು ನೀಡಲಾಗುವುದು. ಅದಕ್ಕಾಗಿಯೇ ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕ ಕ್ರೀಡಾ ಘಟಕ ನಿರ್ಮಿಸಿ, ಅಲ್ಲಿ ಮಲ್ಟಿ ಗೇಮ್ ಕ್ರೀಡಾಂಗಣದ ಸೌಕರ್ಯ ಒದಗಿಸಲಾಗುವುದು. 400 ಮೀಟರ್ ಟ್ರ್ಯಾಕ್ ಸಹ ಅಲ್ಲಿರಲಿದೆ. ಜತೆಗೆ, ಕ್ಯಾಂಪಸ್ ಸುತ್ತ ವಾಕಿಂಗ್ ಪಾತ್ ನಿರ್ಮಿಸಲಾಗುವುದು ಎಂದು ವಿವರಿಸಿದರು.
ಪರಿಸರ ಸ್ನೇಹಿ ವಿವಿ: ವಿಶ್ವವಿದ್ಯಾಲಯವನ್ನು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗುವುದು. ಮಳೆ ನೀರು ಸಂಗ್ರಹಕ್ಕೆ 4-5 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಲಾಗುವುದು. ನೀರನ್ನು ಶೇ. 100ರಷ್ಟು ಪುನರ್ ಬಳಕೆ ಮಾಡಲಾಗುವುದು. ಜತೆಗೆ, 125 ಕಿ.ಲೋ ವ್ಯಾಟ್ ಸಾಮರ್ಥ್ಯದ ಸೌರ ಶಕ್ತಿ ಉತ್ಪಾದನಾ ಘಟಕ ಸ್ಥಾಪಿಸಲಾಗುವುದು. ಕ್ಯಾಂಪಸ್ ಮಧ್ಯ ಹಸಿರು ವಾತಾವರಣ ಸೃಷ್ಟಿಸಿ, ವಿದ್ಯಾರ್ಥಿಗಳು ಅಲ್ಲೇ ಕುಳಿತು ಅಧ್ಯಯನ ನಡೆಸಲು ಅನುಕೂಲ ಮಾಡಿಕೊಡಲಾಗುವುದು.
ಇ-ಆಡಳಿತಕ್ಕೆ ಒತ್ತು: ವಿಶ್ವವಿದ್ಯಾಲಯದ ಆಡಳಿತ ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ಎಲ್ಲವೂ ಆನ್‌ಲೈನ್‌ನಲ್ಲಿರಬೇಕು. ಸರ್ಕಾರದ ಜತೆಗೆ ಆನ್‌ಲೈನ್‌ನಲ್ಲೇ ವ್ಯವಹರಿಸಲು ಸೂಚಿಸಲಾಗಿದೆ. ಈಗಿನಿಂದಲೇ ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬೋಧನಾ ವಿಧಾನವನ್ನೂ ರೂಢಿಸಿಕೊಳ್ಳಬೇಕು ಎಂದರು.