ಬೆಂಗಳೂರು: ''ಯುನೈಟೆಡ್ ಕಿಂಗ್ಡಂನನಲ್ಲಿರುವ ಡಂಡಿ ವಿಶ್ವವಿದ್ಯಾಲಯಕ್ಕೆ ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳ 15 ಮಂದಿ ವಿದ್ಯಾರ್ಥಿಗಳು ಇದೇ ಮೊದಲ ಬಾರಿಗೆ ತೆರಳುತ್ತಿದ್ದಾರೆ. ಈ ವಿದ್ಯಾರ್ಥಿಗಳು ಗುಲ್ಬರ್ಗ, ಯುವಿಸಿಇ ಹಾಗೂ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದವರು'' ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಮಾಹಿತಿ ನೀಡಿದರು.
ಶುಕ್ರವಾರ ಉನ್ನತ ಶಿಕ್ಷಣ ಪರಿಷತ್ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಜೊತೆ ಸಮಾಲೋಚಿಸಿ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ''ವಿದ್ಯಾರ್ಥಿಗಳನ್ನು ಬ್ರಿಟಿಷ್ ಕೌನ್ಸಿಲ್ ಪ್ರಾಯೋಜಕತ್ವ ನೀಡಿ ಕರೆಸಿಕೊಳ್ಳುತ್ತಿದೆ. ವಿದ್ಯಾರ್ಥಿಗಳಲ್ಲಿ ಸ್ಪರ್ಧೆ ಆಧಾರಿತ ಪರಿಕಲ್ಪನೆ ಮತ್ತು ಸಂಶೋಧನೆ ಉತ್ತೇಜಿಸಲು ರಾಜ್ಯ ಉನ್ನತ ಶಿಕ್ಷಣ ಸಂಸ್ಥೆ ಹಾಗೂ ಡಂಡಿ ವಿಶ್ವವಿದ್ಯಾಲಯ ಸಹಯೋಗ ರೂಪಿಸಿದೆ. ಇದು ಆರಂಭಿಕ ಪ್ರಯತ್ನ'' ಎಂದರು.
''ವಿದ್ಯಾರ್ಥಿಗಳು ನಾಲ್ಕು ತಿಂಗಳ ಕಾಲ ಒಂದು ವಿಷಯದ ಮೇಲೆ ಅಧ್ಯಯನ ಮಾಡಲಿದ್ದಾರೆ. ಪೂರ್ಣಗೊಂಡ ನಂತರ ಒಂದು ವಾರಕ್ಕೆ ಬ್ರಿಟಿಷ್ ಕೌನ್ಸಿಲ್ ಮುಖಂತರ ಡಂಡಿ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಪಡಿಸುತ್ತಾರೆ. ಒಂದು ವರ್ಷಕ್ಕೆ ವಿದ್ಯಾರ್ಥಿ ವೇತನ ನಂತರ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಲಿದ್ದೇವೆ. ವಿದೇಶಕ್ಕೆ ತೆರಳಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮತ್ತಷ್ಟು ಉತ್ತೇಜನ ನೀಡಲಿದೆ'' ಎಂದು ತಿಳಿಸಿದರು.
''ವಿದ್ಯಾರ್ಥಿಗಳಲ್ಲಿ 4 ಮೆಕ್ಯಾನಿಕಲ್ ಇಂಜಿನಿಯರ್ಗಳು ಬಳಸಿದ ಅಡುಗೆ ಎಣ್ಣೆ ಬಳಸಿ 4 ಸ್ಟೋಕ್ ವಾಹನದ ಇಂಜಿನ್‌ಗೆ ಬಳಕೆ ಮಾಡಿ ಸಾಧನೆಗೈದಿದ್ದಾರೆ. ಹಲವು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುತ್ತಿದ್ದು, ಅವರ ಪ್ರಯಾಣ ಸುಖಕರವಾಗಿರಲಿ ಮತ್ತು ಶುಭವಾಗಲಿ'' ಎಂದು ಹಾರೈಸಿದರು.
ಅಕ್ಕಿ ರಾಜಕೀಯ: ಬಡವರಿಗೆ ಅಕ್ಕಿ ಕೊಡುವ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರೆಶ್ನಗಳಿಗೆ ಉತ್ತರಿಸಿದ ಸಚಿವ ಸುಧಾಕರ್ ಈ ವಿಚಾರದಲ್ಲಿ ವಿರೋಧ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಯೋಜನೆ ಅನುಷ್ಟಾನ ಆಗುವುದಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇಂಥ ಯೋಜನೆಗಳಿಗೆ ಅಡಚಣೆಗಳಾಗುವುದು ಸಹಜ. ಎಷ್ಟೇ ತೊಂದರೆಗಳು ಎದುರಾದರೂ ಯೋಜನೆ ಜಾರಿಗೆ ತಂದೇ ತರುತ್ತೇವೆ. ಅಷ್ಟು ಅನುಭವ ಮತ್ತು ಸಾಮರ್ಥ್ಯ ಸಿಎಂ ಸಿದ್ದರಾಮಯ್ಯ ಅವರ ಬಳಿಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕರ ತರಬೇತಿ: ಶಾಸಕರ ತರಬೇತಿಗೆ ಸಂಪನ್ಮೂಲ ವ್ಯಕ್ತಿಗಳ ಬದಲಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, ''ಹಿಂದೆ ಕೂಡ ಶಾಸಕರಾಗಿ ಆಯ್ಕೆಯಾದಾಗಲೂ ತರಬೇತಿ ನಡೆಸಲಾಗುತ್ತಿತ್ತು. ನಾನು ಮೊದಲ ಬಾರಿ ಶಾಸಕನಾದಾಗ ಸಿದ್ದಗಂಗಾ ಮಠದಲ್ಲಿ ತರಬೇತಿ ಆಯೋಜನೆ ಮಾಡಲಾಗಿತ್ತು. ಈ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಇದೆ'' ಎಂದು ಉತ್ತರಿಸಿದರು. ಸುದ್ದಿಗೋಷ್ಠಿಯ ನಂತರ ವಿದ್ಯಾರ್ಥಿಗಳಿಗೆ ಪುಷ್ಪಗುಚ್ಛ ನೀಡಿ ಸಚಿವ ಸುಧಾಕರ್ ಅವರು ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಸೇರಿದಂತೆ ಪ್ರಮುಖರು ಇದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿ ಈಜಿಪ್ಟ್ ಪ್ರವಾಸ ನಾಳೆಯಿಂದ: 11ನೇ ಶತಮಾನದ ಅಲ್-ಹಕೀಮ್ ಮಸೀದಿಗೆ ಭೇಟಿ