ಬೆಂಗಳೂರು: ನಗರದ ಹೊರವರ್ತುಲ ರಸ್ತೆಗಳಲ್ಲಿ ಪ್ರತ್ಯೇಕ ತಂಡ ರಚಿಸಿಕೊಂಡು ವ್ಹೀಲಿಂಗ್ ಮಾಡಿ ವಾಹನ ಸವಾರರಿಗೆ ಕಿರಿಕಿರಿ ಮಾಡುತ್ತಿದ್ದ ಬೈಕ್ ಸವಾರರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿರುವ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು 10 ಪ್ರಕರಣ ದಾಖಲಿಸಿ, 14 ಮಂದಿಯನ್ನು ಬಂಧಿಸಿದ್ದಾರೆ.
ನಾಗರಭಾವಿ - ಸುಮನಹಳ್ಳಿ ಭಾಗದ ಹೊರವರ್ತುಲ ರಸ್ತೆಯಲ್ಲಿ ರಾತ್ರಿ ವೇಳೆ ವ್ಹೀಲಿಂಗ್ ಮಾಡಿ ಸಾರ್ವಜನಿಕರ ಜೀವಕ್ಕೆ ಸಂಚಕಾರ ತರುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ನಗರ ಪಶ್ಚಿಮ ವಿಭಾಗ (ಸಂಚಾರ) ಡಿಸಿಪಿ ಅನಿತಾ ಹದ್ದಣ್ಣನವರ್ ಅವರು ಇನ್ಸ್ಪೆಕ್ಟರ್ ಯೊಗೇಶ್ ಎಸ್.ಟಿ. ನೇತೃತ್ವದಲ್ಲಿ ತಂಡ ರಚಿಸಿದ್ದರು. ರಾತ್ರಿ ವೇಳೆ ವ್ಹೀಲಿಂಗ್ ಮಾಡುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ 10 ಪ್ರಕರಣ ದಾಖಲಿಸಿ 14 ದ್ವಿಚಕ್ರವಾಹನಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತರಾಗಿರುವ 14 ಮಂದಿ ಸವಾರರಿಗೂ ಠಾಣಾ ಜಾಮೀನು ನೀಡಲಾಗಿದ್ದು, ಅವರ ಪೋಷಕರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮನಹಳ್ಳಿ ರಿಂಗ್ ರೋಡ್ ನಲ್ಲಿ ಅಪಾಯಕಾರಿಯಾದ ವ್ಹೀಲಿಂಗ್ ಮಾಡಿ ಇನ್ನಿತರ ವಾಹನ ಸವಾರರಿಗೆ ಕಿರಿ-ಕಿರಿ ಮಾಡುತ್ತಿದ್ದರು. ದೋಷಪೂರಿತ ಸೈಲೆನ್ಸರ್ ಅಳವಡಿಸಿ ಸಾರ್ವಜನಿಕರಿಗೂ ತೊಂದರೆ ಉಂಟು ಮಾಡುತ್ತಿದ್ದರು. ಈ ಬಗ್ಗೆ ಹಲವು ದಿನಗಳಿಂದ ಮಾಹಿತಿ ಸಂಗ್ರಹಿಸಿದ ಸಂಚಾರ ಪೊಲೀಸರು ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ 14 ಮಂದಿ ಸವಾರರನ್ನು ಬಂಧಿಸಲಾಗಿದೆ.
ವ್ಹೀಲಿಂಗ್ ಗಾಗಿ ಟೀಮ್ ರಚಿಸಿಕೊಂಡ ಬೈಕ್ ಸವಾರರು ರಿಂಗ್ ರೋಡ್ನಲ್ಲಿ ವ್ಹೀಲಿಂಗ್ ಮಾಡಲು ಪ್ರತ್ಯೇಕವಾಗಿ ಲಗ್ಗರೆ, ಮಾಳಗಾಳ ಎಂದು ತಂಡ ರಚಿಸಿಕೊಂಡಿದ್ದರು. ವಾಹನಗಳನ್ನು ಆಲ್ಟರ್ ಮಾಡಿ ವ್ಹೀಲಿಂಗ್ ಮಾಡಲಾಗುತ್ತಿತ್ತು. ಯಾವುದೇ ಡಿಎಲ್, ವಾಹನಗಳಿಗೆ ಇನ್ಶೂರೆನ್ಸ್ ಕೂಡ ಇರಲಿಲ್ಲ. ಹೆಚ್ಚು ಶಬ್ಧ ಬರುವ ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ವ್ಹೀಲಿಂಗ್ ಮಾಡುತ್ತಿದ್ದರು. ಬಳಿಕ ವಿಡಿಯೋ, ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು.
ಅಷ್ಟೇ ಅಲ್ಲದೆ ಗರ್ಲ್ ಫ್ರೆಂಡ್ ಮುಂದೆ ಫೋಸ್ ಕೊಡೋಕು ಇವರೆಲ್ಲ ವಿಲ್ಹೀಂಗ್ ಮಾಡುತ್ತಿದ್ದರು. ರೌಡಿಶೀಟರ್ ರೀತಿ ಇವರ ವಿರುದ್ಧವೂ ಟ್ರಾಫಿಕ್ ವಿಭಾಗದಲ್ಲಿ ಪ್ರತ್ಯೇಕ ಕೇಸ್ ತೆರೆಯುತ್ತೇವೆ. ಪ್ರಕರಣಲ್ಲಿ ಭಾಗಿಯಾದವರಿಗೆ ತಲಾ 25 ಸಾವಿರ ದಂಡ ವಿಧಿಸಿದ್ದೇವೆ. ಇದೇ ಸಂದರ್ಭದಲ್ಲಿ ಹಿಟ್ ಅಂಡ್ ರನ್ ಕೇಸ್ ಕೂಡ ಪತ್ತೆಯಾಗಿವೆ. ಇನ್ನು ಅಪ್ರಾಪ್ತರಿಗೆ ಪೋಷಕರು ಬೈಕ್ ಕೊಟ್ಟಿದ್ದರೆ ಅವರ ಮೇಲೂ ಪ್ರಕರಣ ದಾಖಲಿಸಲಾಗುವುದು ಎಂದು ಡಿಸಿಪಿ ಅನಿತಾ ಹದ್ದಣ್ಣನವರ್ ತಿಳಿಸಿದ್ದಾರೆ.
ಇದನ್ನೂ ಓದಿ: VIDEO: ಸೋಶಿಯಲ್ ಮೀಡಿಯಾ ಹುಚ್ಚು, ದ್ವಿಚಕ್ರ ವಾಹನ ಕದ್ದು ಸ್ಟಂಟ್ ಮಾಡುತ್ತಿದ್ದ ಯುವಕರ ಬಂಧನ