ಹುಬ್ಬಳ್ಳಿ : ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗಾವಕಾಶ ನೀಡುವ ಜಾಹೀರಾತು ಹರಿಬಿಟ್ಟು ನಗರದ ಮಹಿಳೆಯೊಬ್ಬರಿಗೆ ಬರೋಬ್ಬರಿ 14.56 ಲಕ್ಷ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ವರ್ಕ್ ಫ್ರಂ ಹೋಂ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು ಎಂದು ದಿವ್ಯಾ ಎಂಬ ಹೆಸರಿನ ಯುವತಿ ಜಾಹೀರಾತು ಹಾಕಿದ್ದರು. ಅಲ್ಲದೇ, ಆನ್‍ಲೈನ್ ಲಿಂಕ್ ಸಹಿತ ಕಳುಹಿಸಿದ್ದು, ಬಳಿಕ ಅರ್ಜನ್ ಎಂಬ ಹೆಸರಿನ ವ್ಯಕ್ತಿ ಮಹಿಳೆಯ ಜೊತೆಗೆ ವಾಟ್ಸಪ್ ಮತ್ತು ಟೆಲಿಗ್ರಾಂ ಆ್ಯಪ್ನಿಂದ ಚಾಟ್ ಮಾಡಿದ್ದಾನೆ. ಅಲ್ಲದೆ ದಿವ್ಯಾ ನೀಡಿದ್ದ ಲಿಂಕ್ ಕ್ಲಿಕ್ ಮಾಡುವಂತೆ ಹೇಳಿದ್ದಾನೆ.
ನಂತರ ಹಣ ವರ್ಗಾಯಿಸುವ ಆ್ಯಪ್ವೊಂದರ ಮೂಲಕ ರಿಚಾರ್ಜ್ ಮಾಡಲು ಹೇಳಿ, 100 ರೂ. ರಿಚಾರ್ಜ್ ಮಾಡಿಸಿಕೊಂಡು ಅದೇ ಆ್ಯಪ್ ಮೂಲಕ ಮಹಿಳೆಗೆ 200 ರೂ. ಮರಳಿ ಕಳಿಸಿದ್ದಾನೆ. ಹೀಗೆಯೇ 3 ಸಾವಿರ ರೂ.ಗೆ 3,400 ರೂ 20 ಸಾವಿರಕ್ಕೆ 24 ಸಾವಿರ ರೂ. ಮಹಿಳೆಗೆ ಹಾಕಿ ನಂಬಿಸಿದ್ದಾನೆ.
ಇದೇ ರೀತಿ ಆ್ಯಪ್ನಲ್ಲಿ ಹೆಚ್ಚು ಹಣ ಹೂಡಿಕೆ ಮಾಡಿದರೆ, ಹೆಚ್ಚು ಹಣ ಗಳಿಸಬಹುದು ಎಂದು ಹೇಳಿದ ವಂಚಕನ ಮಾತನ್ನು ನಂಬಿದ ಮಹಿಳೆ ಆನ್‍ಲೈನ್ ಮೂಲಕ ಆರೋಪಿಯ ಬ್ಯಾಂಕ್ ಖಾತೆಗೆ ಒಮ್ಮೆ 1.91 ಲಕ್ಷ ರೂ. ಹಾಗೂ ಬಳಿಕ 12.65 ಲಕ್ಷ ರೂ. ವರ್ಗಾವಣೆ ಮಾಡಿದ್ದಾಳೆ. ನಂತರ ಹಣ ಮರಳಿ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಮಹಿಳೆ ಈ ಬಗ್ಗೆ ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾಳೆ.
ಇದನ್ನೂ ಓದಿ: ಜಮೀನು ವಿವಾದಕ್ಕೆ ಒಂದೇ ಕುಟುಂಬದ ನಾಲ್ವರ ಕೊಲೆ: ಬೆಚ್ಚಿಬಿದ್ದ ಜಮಖಂಡಿ ಜನ