ಬೆಂಗಳೂರು : ನಮ್ಮ ಆರೋಗ್ಯದ ಜೊತೆ ಇತರರ ಆರೋಗ್ಯವೂ ಮುಖ್ಯ ಎನ್ನುವುದನ್ನು ಎಲ್ಲರೂ ಮನಗಂಡು ಇಂದು ರಾತ್ರಿ 9 ಗಂಟೆಯಿಂದ ಮುಂದಿನ 14 ದಿನಕ್ಕೆ ಅನ್ವಯವಾಗುವಂತೆ ಜಾರಿಯಾಗುವ ಹೊಸ ಮಾರ್ಗಸೂಚಿಗೆ ಜನರು ಸಹಕಾರ ನೀಡಬೇಕು.
ಜನರು ಸ್ವಯಂ ನಿರ್ಬಂಧ ವಿಧಿಸಿಕೊಂಡು ಮನೆಯಲ್ಲೇ ಇದ್ದು ಕೊರೊನಾ ವಿರುದ್ಧದ ಹೋರಾಟಕ್ಕೆ ಸಾಥ್ ನೀಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಆರ್.ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾತ್ರಿ 9 ಗಂಟೆಯಿಂದ 14 ದಿನ ಹೊಸ ಮಾರ್ಗಸೂಚಿ ಇರಲಿದೆ. ಹಗಲು ಸಮಯ ಕೂಡ ಬಿಗಿಯಾದ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ.
ಈ 14 ದಿನ ಜನರು ಸ್ವಯಂ ನಿಯಂತ್ರಣ ಮಾಡಿಕೊಂಡರೆ ಕೊರೊನಾ ಎದುರಿಸಲು ಸಾಧ್ಯವಿದೆ. ಸ್ವಯಂ ನಿಯಂತ್ರಣ ಬಹಳ ಅವಶ್ಯಕತೆ ಇದೆ. ಸ್ವಯಂ ನಿಯಂತ್ರಣದಲ್ಲೇ ಇದರ ಯಶಸ್ವಿ ಇದೆ. 14 ದಿನ ಪ್ರತಿಯೊಬ್ಬರೂ ಕೂಡ ಜಾಗೃತಿಯಾಗಿರಬೇಕು. ಸರ್ಕಾರದ ನಿರ್ಬಂಧಕ್ಕೆ ಅನುಗುಣವಾಗಿ ನಡೆದುಕೊಳ್ಳುವುದು ಅಗತ್ಯವಿದೆ ಎಂದರು.
ಮುಂದಿನ14 ದಿನ ಇನ್ನಷ್ಟು ಬಿಗಿ ಕ್ರಮ ಇರುವುದರಿಂದ ಅದನ್ನ ಯಶಸ್ವಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಬಿಗಿ ಕ್ರಮ ಕೈಗೊಂಡ ಕಾರಣದಿಂದಲೇ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ.
ಆ ನಿಟ್ಟಿನಲ್ಲಿ ಈಗ ನಮ್ಮ ಸರ್ಕಾರ ಕ್ಯಾಬಿನೆಟ್ನಲ್ಲಿ ಚರ್ಚೆ ಮಾಡಿ ನಂತರ ಸಿಎಂ ಯಡಿಯೂರಪ್ಪ 14 ದಿನಗಳ ಕಠಿಣ ನಿರ್ಧಾರ ಜಾರಿಗೊಳಿಸುವ ತೀರ್ಮಾನ ಮಾಡಿದ್ದಾರೆ. ಅದನ್ನು ಎಲ್ಲರೂ ಪಾಲನೆ ಮಾಡಬೇಕು ಎಂದರು. ಸರ್ಕಾರದ ನಿರ್ಬಂಧವನ್ನು ಉಲ್ಲಂಘನೆ ಮಾಡಿ ಅನಗತ್ಯವಾಗಿ ಓಡಾಟ ನಡೆಸಿದರೆ ಮೊದಲು ತಿಳಿ ಹೇಳುತ್ತೇವೆ.
ನಂತರ ಉದ್ದೇಶಪೂರ್ವಕವಾಗಿ ಉಲ್ಲಂಘನೆ ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ. ಕಟ್ಟಡ ಕಾರ್ಮಿಕರಿಗೆ ಕರ್ತವ್ಯಕ್ಕೆ ತೆರಳಲು ಅವಕಾಶವಿದೆ. ವೈದ್ಯಕೀಯ ಸೇವೆ, ಅನುಮತಿಸಿದ ವಲಯದಲ್ಲಿ ಕೆಲಸಕ್ಕೆ ಹೋಗುವವರಿಗೆ, ತುರ್ತು ಸೇವೆಗೆ ತೆರಳುವವರಿಗೆ ಬಿಎಂಟಿಸಿ ಬಸ್ ಸೇವೆ ಇರಲಿದೆ.
ಆದರೆ, ಅದರಲ್ಲಿ ಸಾಮಾನ್ಯರ ಓಡಾಟಕ್ಕೆ ನಿರ್ಬಂಧವಿದೆ. ತುರ್ತು ಸೇವೆ ಅಗತ್ಯ ಸೇವೆಗೆ ಮಾತ್ರ ಅವಕಾಶವಿದ್ದು, ಅದನ್ನು ಬಳಸಿಕೊಳ್ಳಬಹುದು ಎಂದರು. ಈಗಾಗಲೇ ನಗರ ಪೊಲೀಸ್ ಆಯುಕ್ತರಿಗೆ ಬಿಗಿ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ.
ಇಂದು ರಾತ್ರಿಯಿಂದ 14 ದಿನ ಕಠಿಣ ಮಾರ್ಗಸೂಚಿಯಂತೆ ಕಟ್ಟೆಚ್ಚರ ವಹಿಸಲಿದ್ದಾರೆ. ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲಿಯೂ ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದೇನೆ ಎಂದರು.