ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ 13ನೇ ರಾಜ್ಯ ವನ್ಯಜೀವಿ ಮಂಡಳಿ ಸಭೆ ಜರುಗಿತು. ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ ಅತ್ಯಂತ ತುರ್ತಾಗಿ ಆಗಮಿಸಿದ ಸಿಎಂ ಬಿಎಸ್ವೈ ಬಂದಷ್ಟೇ ಬೇಗ ಕಾರ್ಯಕ್ರಮ ಪೂರ್ಣಗೊಳಿಸಿ ತೆರಳಿದರು.
ಈ ಕಾರ್ಯಕ್ರಮದ ಬಳಿಕ ಬಿಬಿಎಂಪಿ ಆಯುಕ್ತರನ್ನು ಭೇಟಿ ಮಾಡಿ ಚರ್ಚಿಸುವ ಕಾರ್ಯವಿತ್ತು. ಆದರೆ, ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ವಿಧಾನ ಪರಿಷತ್ನಲ್ಲಿ ಉತ್ತರ ನೀಡಬೇಕಿದ್ದ ಕಾರಣ ತರಾತುರಿಯಲ್ಲಿ ಸಿಎಂ ತೆರಳಿದರು. ಹಾಗಾಗಿ ಬಿಬಿಎಂಪಿ ಆಯುಕ್ತರ ಜತೆ ಸಭೆ ನಡೆಯಲಿಲ್ಲ. 2014ರ ಮಾರ್ಚ್ 8ರಂದು ವನ್ಯಜೀವಿ ಮಂಡಳಿ ರಚನೆಯಾಗಿದ್ದು, ಅಂದಿನ ಸಿಎಂ ಸಿದ್ದರಾಮಯ್ಯ ಇದನ್ನು ರಚಿಸಿದ್ದರು. ನಿರಂತರವಾಗಿ ಇದು ತನ್ನ ಕಾರ್ಯವನ್ನು ಮುಂದುವರೆಸಿಕೊಂಡು ಬಂದಿದೆ.
ಈ ವೇಳೆ ಅರಣ್ಯ ಸಚಿವ ಆನಂದ್ ಸಿಂಗ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್, ಶಾಸಕಿ ಸೌಮ್ಯರೆಡ್ಡಿ, ಮುಖ್ಯಮಂತ್ರಿಗಳ ಸಲಹೆಗಾರ ಎಂ ಲಕ್ಷ್ಮಿನಾರಾಯಣ್ ಉಪಸ್ಥಿತರಿದ್ದರು.