ಬೆಂಗಳೂರು: ದೇಶದಲ್ಲಿ ಮತ್ತು ರಾಜ್ಯದಲ್ಲಿ ನಾವು ಭಿನ್ನಾಭಿಪ್ರಾಯ ಹೊಂದಿದ್ದೇವೆ, ಅದನ್ನು ಬಿಟ್ಟು ಒಗ್ಗಟ್ಟಿನ ಮಂತ್ರ ಜಪಿಸಬೇಕು ಎಂದು ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರು ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದ್ದಾರೆ.
ರೇಸ್ ಕೋಸ್೯ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಇಂದು ಕಾಂಗ್ರೆಸ್ ನ 136ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೊಂದಲವನ್ನು ಸರಿಪಡಿಸಿಕೊಂಡು ಸೋನಿಯಾ ಗಾಂಧಿ ಕೈ ಬಲಪಡಿಸಬೇಕು ಎಂದು ಹೇಳಿದರು.
ನಮ್ಮನ್ನು ಕೆಣಕುವ ಕೆಲಸ ಬಿಜೆಪಿ ಮಾಡುತ್ತಿದೆ. ಹೀಗಾಗಿ ನಾವು ಎಚ್ಚರಿಕೆಯಿಂದ ಇರಬೇಕು. ದೇಶದಲ್ಲಿ ಕಾಂಗ್ರೆಸ್ ನೂರಾರು ಕಾರ್ಯಕ್ರಮ ತಂದು ಜನರಿಗೆ ಅನುಕೂಲ ಮಾಡಿಕೊಟ್ಟಿದೆ.
ಆದರೆ ಇಂದು ಬಿಜೆಪಿ ತಮ್ಮ ಸ್ವಾರ್ಥಕ್ಕೆ ಕಾನೂನುಗಳನ್ನು ಜಾರಿ ಮಾಡಲು ಹೊರಟಿದೆ. ಬಿಜೆಪಿ ತನ್ನ ಅನುಕೂಲಕ್ಕೆ ರಾಷ್ಟ್ರಪತಿ ಆಡಳಿತ ತರುವ ಹಾದಿಯಲ್ಲಿ ಇದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಈಗ ನಾವು ಎಲ್ಲರೂ ಸೋನಿಯಾ ಗಾಂಧಿಯವರ ಕೈ ಬಲ ಪಡಿಸಬೇಕು. ಮುಂದೆ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇವತ್ತು ಕಾಂಗ್ರೆಸ್ಸಿಗರಿಗೆ ಮಹತ್ವದ ದಿನ. ನಮ್ಮ ಪೂರ್ವಜರ ಋಣ ನಮ್ಮ ಮೇಲಿದೆ. ಸ್ವಾತಂತ್ರ್ಯ ಹೋರಾಟದ ಸಂಘಟನೆ ಮಾಡಿದ್ದು ಕಾಂಗ್ರೆಸ್. ಗಾಂಧೀಜಿಯವರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿತ್ತು. 1885 ರಲ್ಲಿ ಕಾಂಗ್ರೆಸ್ ಸ್ಥಾಪನೆಯಾಯಿತು. ಕಾಂಗ್ರೆಸ್ ಪಕ್ಷ ಸ್ಥಾಪಿಸಿದ ನಾಯಕರನ್ನು ನಾವು ನೆನಪು ಮಾಡಿಕೊಳ್ಳಬೇಕು ಎಂದರು.
ಸ್ವಾತಂತ್ರ್ಯ ಹೋರಾಟಕ್ಕೆ ಎ.ಓ. ಹ್ಯೂಮ್ ಕಾಂಗ್ರೆಸ್ ಸಂಘಟನೆ ಹುಟ್ಟು ಹಾಕಿದ್ದರು. ನಂತರ ಅದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಆಯಿತು. ಭಾರತೀಯರ ಧ್ವನಿಯಾಗಲು ಕಾಂಗ್ರೆಸ್ ಸ್ಥಾಪಿಸಿದ್ದರು. ಬ್ರಿಟಿಷರ ವಿರುದ್ಧ ಹೋರಾಟ ಮಾಡಲು ಅದೇ ವೇದಿಕೆ ಆಯಿತು. ಆಗ ಕೇವಲ 72 ಜನ ಸದಸ್ಯರು ಇದ್ದರು. ಸಭೆ ಮಾಡಿ ಹೋರಾಟಕ್ಕೆ ಸಜ್ಜಾದರು. ಸಿಪಾಯಿ ದಂಗೆ ಮೊದಲ ಸ್ವತಂತ್ರ ಸಂಗ್ರಾಮ. ಇದಕ್ಕೆ ರೂವಾರಿ ಆದವರೇ ಕಾಂಗ್ರೆಸ್ ಹುಟ್ಟಲು ಕಾರಣ ಎಂದು ಹೇಳಿದರು.
ಕಾಂಗ್ರೆಸ್ ಐಡಿಯಾಲಜಿ 136 ವರ್ಷದಿಂದ ಬದಲಾವಣೆ ಆಗಿಲ್ಲ. ನಮಗೆ ಅದೇ ಬದ್ದತೆ ಇದೆ. ಬಿಜೆಪಿ ತರಹ ಒಡೆದು ಆಳುವ ನೀತಿ ಇಲ್ಲ. ಒಟ್ಟುಗೂಡಿಸುವ ಬದ್ದತೆ ಕಾಂಗ್ರೆಸ್ಗೆ ಇದೆ. ಸೋನಿಯಾ ಗಾಂಧಿ ಅತಿ ಹೆಚ್ಚು ಕಾಲ ಕಾಂಗ್ರೆಸ್ ಮುನ್ನಡೆಸಿದ್ದಾರೆ. ನಾವು ದೇಶಕ್ಕೆ ಏನು ಮಾಡಿದ್ದೇವೆ ಅಂತ ಬಿಜೆಪಿಯವರು ಕೇಳುತ್ತಾರೆ. ನಾವು ಸ್ವಾತಂತ್ರ್ಯ ಮಾತ್ರ ತಂದು ಕೊಟ್ಟಿಲ್ಲ. ನಾವು ಆರ್ಥಿಕ ಸುಧಾರಣೆ ಕೂಡ ಮಾಡಿದ್ದೇವೆ. ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವ ಹಾಗೆ ಮಾಡಿದ್ದೇವೆ. ಜನ ನಿಮ್ಮ ಕೈಗೆ ಅಧಿಕಾರ ಕೊಟ್ಟಿದ್ದಾರೆ. ಆದರೆ ನಿವು ಇವತ್ತು ಏನು ಮಾಡುತ್ತಿದ್ದಿರಾ?. ಎಲ್ಲರನ್ನೂ ಒಡೆದಾಳುತ್ತಿದ್ದಿರಾ? ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
2025ಕ್ಕೆ ಭವಿಷ್ಯದ ರಾಷ್ಟ್ರ ಆಗುತ್ತದೆ ಅಂತ ಹೇಳ್ತಿದ್ದಾರೆ. ಬಿಜೆಪಿಯವರು ರಾಷ್ಟ್ರ ಕಟ್ಟಿದ್ದಾರಾ? ಪ್ರತಿಯೊಬ್ಬ ವ್ಯಕ್ತಿಗೆ ಉದ್ಯೋಗ ಕೊಡಬೇಕು ಅಂತ ನೀವು ಮಾಡಿದ್ರಾ?. ಅಧಿಕಾರ ವೀಕೇಂದ್ರಿಕರಣ ಮಾಡಿದ್ದು ಕಾಂಗ್ರೆಸ್. ಇದರ ಪರಿಕಲ್ಪನೆ ಬಿಜೆಪಿಗೆ ಇದೆಯಾ ಎಂದು ಕಿಡಿಕಾರಿದರು.
ಕಾಂಗ್ರೆಸ್ಗೆ ಬದ್ಧತೆ ಇದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರಿಗೆ ಸ್ವಾತಂತ್ರ್ಯ ಕೊಡಿಸುವ ವಿಚಾರದಲ್ಲಿ ಬದ್ಧತೆ ಇದೆ. ಇದು ಬಿಜೆಪಿ ಮತ್ತು ಇತರ ಪಕ್ಷಗಳಿಗೆ ಇಲ್ಲ. ನಮ್ಮ ಬದ್ಧತೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ರಾಣಿ ಸತೀಶ್, ಸಂಸದ ಚಂದ್ರಶೇಖರ್ ಮತ್ತಿತರ ಮುಖಂಡರು ಇದ್ದರು.