ಬೆಂಗಳೂರು: ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 12ನೇ ಘಟಿಕೋತ್ಸವದಲ್ಲಿ ಮಣಿಪುರದ ರಾಜ್ಯಪಾಲ ಲಾ ಗಣೇಶನ್ ವಿವಿಧ ವಿಭಾಗಗಳಲ್ಲಿ ಪ್ರಥಮ ರಾಂಕ್ ಗಳಿಸಿದ 50 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಿದರು.
ಮೈಸೂರು ರಸ್ತೆಯಲ್ಲಿರುವ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಎಸಿಎಸ್ ಕನ್ವೆಂಷನ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಮೊದಲ ರ‍್ಯಾಂಕ್ ಪಡೆದ ಡಾ.ಪ್ರದೀಪ್ ಈಶ್ವರಪ್ಪಗೋಳು, ಡಾ.ಗುರಜಲ ಸ್ಪೂರ್ತಿ, ಪದವಿ ವಿಭಾಗದಲ್ಲಿ ಡಾ.ಹರ್ಷಿತಾ, ಡಾ.ರೋಹಿಣಿ, ಡಾ.ಪ್ರಣತಿ ಸೇರಿ ಇತರರಿಗೆ ಚಿನ್ನದ ಪದಕ ಮತ್ತು ಪಾರಿತೋಷಕ ಪ್ರದಾನ ಮಾಡಲಾಯಿತು.
ರಾಂಕ್ ಪಡೆದ ಮತ್ತು ಪದವಿ ಸ್ವೀಕರಿಸಿದ ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಮಣಿಪುರದ ರಾಜ್ಯಪಾಲ ಗಣೇಶನ್ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಇಂದಿನ ವೈದ್ಯಕೀಯ ವಿದ್ಯಾರ್ಥಿಗಳು ಮುಂದೆ ಬರಬೇಕು ಎಂದು ಹೇಳಿದರು.
ಏಷ್ಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲು : ಮೊದಲ ಬಾರಿಗೆ ರಾಜರಾಜೇಶ್ವರಿ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಪದವಿ ಪ್ರಮಾಣ ಪತ್ರದ ಜತೆಗೆ ರಾಷ್ಟ್ರಧ್ವಜವನ್ನು ಹಿಡಿದು ನಮ್ಮ ವೈದ್ಯಸೇವೆ ಮಾನವೀಯತೆ ಮತ್ತು ರಾಷ್ಟ್ರಕ್ಕಾಗಿ ಅರ್ಪಣೆ ಎಂದು ಪ್ರಮಾಣ ಸ್ವೀಕರಿಸಿದ್ದು, ಇದು ಏಷ್ಯಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ.
ಎಲ್ಲೆಡೆ ರಾರಾಜಿಸಿದ ತಿರಂಗಾ: ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನದ ನಿಮಿತ್ತ ರಾಜರಾಜೇಶ್ವರಿ ಸಮೂಹ ಸಂಸ್ಥೆಗಳ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಮಣಿಪುರದ ರಾಜ್ಯಪಾಲ ಗಣೇಶನ್ ಆಗಮಿಸುವ ಸಂದರ್ಭದಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ದೇಶಕ್ಕೆ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಂಸ್ಥಾಪನ ಕುಲಪತಿಗಳಾದ ಎ.ಸಿ.ಷಣ್ಮುಗಮ್, ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಾ.ವಿಜಯಾನಂದ, ಡೀನ್ ಡಾ.ಸತ್ಯಮೂರ್ತಿ, ಪ್ರಾಂಶುಪಾಲರಾದ ಡಾ.ನವೀನ್ ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ಓದಿ :ಸಿಎಂ ಬದಲಾವಣೆ ಹೇಳಿಕೆ ನೀಡಿದ ಮಾಜಿ ಶಾಸಕರಿಗೆ ಸಿಎಂ, ಕಟೀಲ್ ವಾರ್ನಿಂಗ್