ಬೆಂಗಳೂರು : ಇತ್ತೀಚಿನ ವರ್ಷಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಕಳೆದ 9 ತಿಂಗಳಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 12,615 ಪ್ರಕರಣಗಳು ವರದಿಯಾಗಿದ್ದು, ಸುಮಾರು 470 ಕೋಟಿ ರೂಪಾಯಿ ವಂಚನೆಯಾಗಿದೆ.
ರಾಜಧಾನಿಯಲ್ಲಿ ದಾಖಲಾಗಿದ್ದ 12,615 ಪ್ರಕರಣಗಳನ್ನು ತನಿಖೆ ನಡೆಸಿ ವಿವಿಧ ಬ್ಯಾಂಕ್ಗಳ ಮುಖಾಂತರ 201.83 ಕೋಟಿ ರೂ. ಹಣ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸೈಬರ್ ಖದೀಮರಿಂದ 28.40 ಕೋಟಿ ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 27.68 ಕೋಟಿ ವಾರಸುದಾರರಿಗೆ ಪೊಲೀಸರು ಹಿಂತಿರುಗಿಸಿದ್ದಾರೆ.
ಸೈಬರ್ ಚೋರರು ಆನ್ಲೈನ್ನಲ್ಲಿ ಅರೆಕಾಲಿಕ ಉದ್ಯೋಗ ಮಾಡಿದರೆ ಸಾವಿರಾರು ರೂಪಾಯಿ ಸಂಬಳ ಗಳಿಸಬಹುದು ಎಂದು ಹೇಳಿ ಜನರಿಗೆ ಅರ್ಜಿ ಶುಲ್ಕ, ಪೂರ್ವಾಪರ ಪರಿಶೀಲನೆ ನೆಪದಲ್ಲಿ ಅಗತ್ಯ ಮಾಹಿತಿ ಸಂಗ್ರಹಿಸಿ ವಂಚಿಸುತ್ತಿದ್ದಾರೆ. ಈ ರೀತಿ 3,346 ಪ್ರಕರಣ ದಾಖಲಾಗಿದ್ದು, 204 ಕೋಟಿ ವಂಚನೆಯಾಗಿದೆ. ಅದೇ ರೀತಿ ಡೆಬಿಟ್ /ಕ್ರೆಡಿಟ್ ಕಾರ್ಡ್ ನೆಪದಲ್ಲಿ 60.80 ಕೋಟಿ ಹಾಗೂ ಸ್ಟಾರ್ಟಪ್ ಕಂಪನಿ ಹೆಸರಿನಲ್ಲಿ 60.53 ಕೋಟಿಯನ್ನು ಖದೀಮರು ವಂಚಿಸಿದ್ದಾರೆ.
ದಿನೇ ದಿನೇ ಸೈಬರ್ ಕ್ರೈಂ ಅಪರಾಧ ಪ್ರಕರಣ ಹೆಚ್ಚಾಗುತ್ತಿದ್ದಂತೆ ತನಿಖೆ ನಡೆಸಲು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪಗಳ ಬೆನ್ನಲೇ ನಗರ ಪೊಲೀಸರು ತನಿಖೆಗೆ ಕಾಲಮಿತಿ ನಿಗದಿಪಡಿಸಿದ್ದಾರೆ. ಪ್ರಕರಣ ದಾಖಲಾದ 60 ದಿನದೊಳಗಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಬೇಕು. ಒಂದು ವೇಳೆ ತನಿಖೆಗೆ ವಿಳಂಬವಾದರೆ ಎಸಿಪಿ ಅಥವಾ ಡಿಸಿಪಿಯಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದು ಪೊಲೀಸ್ ಕಮಿಷನರ್ ದಯಾನಂದ್ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಯ (ಎಇಪಿಎಸ್ ) ವಂಚನೆ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಬೆರಳಚ್ಚು ಬಳಸಿ ಹಣ ಲಪಟಾಯಿಸುವುದರ ಹೊಸ ಕಲೆಯನ್ನು ಖದೀಮರು ರೂಪಿಸಿಕೊಂಡಿದ್ದಾರೆ. ಜನರಿಂದ ಬಯೊಮೆಟ್ರಿಕ್ ಸಂಗ್ರಹಿಸಿ ನಗರ ಮಾತ್ರವಲ್ಲದೇ, ಗ್ರಾಮೀಣ ಭಾಗದಲ್ಲಿ ವಂಚಿಸುತ್ತಿದ್ದಾರೆ ಎಂಬುದು ಆತಂಕ ಮೂಡಿಸಿದೆ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ಸೈಬರ್ ವಂಚನೆಗಳಿಂದ ತಪ್ಪಿಸಿಕೊಳ್ಳುವುದು ಹೇಗೆ : ನಿಮಗೆ ಬಹುಮಾನ ಬಂದಿದೆ ಹಾಗೂ ನಿಮ್ಮ ಬ್ಯಾಂಕ್ನ ಮೂಲ ದಾಖಲಾತಿಗಳ ಅಪ್ಡೇಟ್ ಮಾಡಲು ದೂರವಾಣಿ ಕರೆ ಮಾಡಿ, ಬ್ಯಾಂಕ್ನ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ಬಗ್ಗೆ ಫೋನ್ನಲ್ಲಿ ಮಾಹಿತಿ ಕೇಳಿದರೆ ಯಾರು ನೀಡಬೇಡಿ. ಏನಾದರೂ ವಂಚನೆಗೊಳಗಾದರೆ ತಕ್ಷಣ ಬ್ಯಾಂಕ್ಗೆ ಹೋಗಿ ನಿಮ್ಮ ಖಾತೆಯನ್ನು ಲಾಕ್ ಮಾಡಿಸಿ, ಆನಂತರ ಸೈಬರ್ ಠಾಣೆಗೆ ದೂರು ನೀಡಿದರೆ ನೀವು ಕಳೆದುಕೊಂಡ ಹಣವನ್ನು ಪುನಃ ಪಡೆಯಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಕೇಂದ್ರ ಸರ್ಕಾರ ಸೈಬರ್ ಕ್ರೈಂ ವೆಬ್ ಸೈಟ್ ಆರಂಭಿಸಿದ್ದು, ಅಲ್ಲಿ ಕೂಡ ಮಾಹಿತಿ ನೀಡಬಹುದು ಹಾಗೂ 1098 ಟೋಲ್ ಫ್ರೀ ನಂಬರ್ಗೆ ಕರೆ ಮಾಡಬಹುದು. ಈ ರೀತಿ ವಂಚನೆಯಿಂದ ತಪ್ಪಿಸಿಕೊಳ್ಳಬಹುದು. ಇದರ ಜೊತೆಗೆ ಸೈಬರ್ ಕ್ರೈಂ ಬಗ್ಗೆ ಹೆಚ್ಚಾಗಿ ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಾಲೇಜು ಹಂತದಲ್ಲಿ ತಿಳಿವಳಿಕೆ ನೀಡಲು ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಬೇಕು.
ಇದನ್ನೂ ಓದಿ : ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗಲು ಕಾರಣಗಳೇನು? : ತಜ್ಞರು ಸಲಹೆಗಳೇನು?