ಬೆಂಗಳೂರು: ಕೋವಿಡ್ ಸಂಕಷ್ಟಗಳನ್ನು ದಿನಾ ಮಾಧ್ಯಮಗಳ ಮೂಲಕ ನೋಡ್ತಿದ್ದ 12 ವರ್ಷದ ಮಯಾಂಕ್ ಎಂಬ ಬೆಂಗಳೂರಿನ ಹುಡುಗ ತನ್ನ ನಾಲ್ಕು ವರ್ಷದ ಪಾಕೆಟ್ ಮನಿಯನ್ನು ಕೋವಿಡ್ ಸಂಕಷ್ಟಕ್ಕೆ ದಾನ ಮಾಡಿದ್ದಾನೆ.
ಇಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರಿಗೆ 4,190 ರೂ. ಹಣವನ್ನು ಹಸ್ತಾಂತರಿಸಿ, ದೊಡ್ಡಗುಣ ಮೆರೆದಿದ್ದಾನೆ. ಕೋವಿಡ್ ಜನಸಾಮಾನ್ಯರಿಗೆ, ಬಡವರಿಗೆ ತಂದಿರುವ ಪರಿಸ್ಥಿತಿಗೆ ಮನನೊಂದು, ಆಸ್ಪತ್ರೆ, ಬೆಡ್ ಹಾಗೂ ಆಕ್ಸಿಜನ್ ಸಿಗದೇ ಮೃತಪಡುತ್ತಿರುವವರ ನೋವು ಕಂಡು ಮಯಾಂಕ್ ತನ್ನ ಕೈಲಾದ ಸಹಾಯ ಮಾಡಿ ಹೃದಯ ವೈಶಾಲ್ಯತೆ ಮೆರೆದಿದ್ದಾನೆ.
ಹೆಸರಘಟ್ಟ ರಸ್ತೆಯ ಎಮ್ಇಐ ಲೇಔಟ್ನ ನಿವಾಸಿಯಾಗಿರುವ ಈ ಬಾಲಕ ಕಳೆದ ಒಂದು ವಾರದಿಂದ ಸರ್ವೇ ಇಲಾಖೆಯ ಉದ್ಯೋಗಿಯಾಗಿರುವ ತಂದೆ ಅಭಿನಂದನ್ ಅವರ ಬಳಿ ಜಿಲ್ಲಾಧಿಕಾರಿ ಬಳಿ ಕರೆದುಕೊಂಡು ಹೋಗುವಂತೆ ಪೀಡಿಸುತ್ತಿದ್ದ. ಕೋವಿಡ್ ಸ್ವಲ್ಪ ಇಳಿಕೆ ಆದ ಮೇಲೆ ಹೋಗೋಣ ಎಂದು ಮಾತು ಕೊಟ್ಟಿದ್ದ ಅಭಿನಂದನ್ ಅವರು, ಇಂದು ಜಿಲ್ಲಾಧಿಕಾರಿ ಕಚೇರಿಗೆ ಕರೆದುಕೊಂಡು ಬಂದಿದ್ದಾರೆ. ಇಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ನಿಧಿಗೆ ಜಮೆ ಮಾಡಲು ತನ್ನ ಉಳಿತಾಯದ ಹಣ ಸಮರ್ಪಿಸಿದ್ದಾರೆ.