ಬೆಂಗಳೂರು: ಪಾಲಿಕೆಯಿಂದ ಗುತ್ತಿಗೆಗೆ ನೀಡಲಾಗಿರುವ ಕೆಲ ಆಸ್ತಿಗಳ ಅವಧಿ ಮುಗಿದಿದ್ದು, ಅದನ್ನು ಶೀಘ್ರದಲ್ಲೇ ವಾಪಸ್ ಪಡೆಯಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆಸ್ತಿ) ರಾಮಪ್ರಸಾದ್ ಮನೋಹರ್ ತಿಳಿಸಿದರು. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಪಾಲಿಕೆ ಅಡಿಯಲ್ಲಿ 6,215 ಆಸ್ತಿಗಳಿದ್ದು, ಈ ಪೈಕಿ ಗುತ್ತಿಗೆಗೆ ನೀಡಲಾಗಿರುವ 163 ಆಸ್ತಿಗಳ ಅವಧಿ ಮುಗಿದಿದೆ. ಸದ್ಯ ಏಳನ್ನು ತೆರವುಗೊಳಿಸಲಾಗಿದ್ದು, ಶೀಘ್ರದಲ್ಲೇ ಎಲ್ಲವನ್ನೂ ತೆರವು ಮಾಡಲಾಗುವುದು ಎಂದರು.
ನಗರದಲ್ಲಿ ಒಟ್ಟು 13,424 ರಸ್ತೆ ಗುಂಡಿಗಳಿದ್ದು, 516 ಗುಂಡಿಗಳನ್ನು ನಿನ್ನೆ ಮುಚ್ಚಲಾಗಿದೆ. ಈವರೆಗೂ 11,315 ಗುಂಡಿಗಳನ್ನು ಮುಚ್ಚಲಾಗಿದೆ. 2,109 ಗುಂಡಿಗಳನ್ನು ಮುಚ್ಚಲು ಬಾಕಿಯಿದೆ. ಕೆರೆಗಳನ್ನು ಉಳಿಸಲು ಅನುದಾನ ನೀಡುವ ಜೊತೆಗೆ ಜಾಗೃತಿ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಮತ್ತು ಸಾಕ್ಸ್ ಅನ್ನು ಜುಲೈ 10ರೊಳಗೆ ನೀಡಲಾಗುತ್ತದೆ. ವಾರದಲ್ಲಿ ಪುಸ್ತಕಗಳನ್ನು ನೀಡಲಾಗುತ್ತದೆ. ಇಸ್ಕಾನ್ ಸಹಭಾಗಿತ್ವದಲ್ಲಿ ಒಟ್ಟು 11 ಸಾವಿರ ಮಕ್ಕಳಿಗೆ ಬಿಸಿಯೂಟ ನೀಡಲಿದ್ದೇವೆ ಎಂದು ಮಾಹಿತಿ ನೀಡಿದರು. ದಾಸರಹಳ್ಳಿ ವಲಯದ ಸಿದ್ಧಾರ್ಥ್ ನಗರದ ಶಾಲೆಯೊಂದಕ್ಕೆ ಹೋಗಿದ್ದೆ. ಶಾಲೆಗೆ ಹೋಗುವ ರಸ್ತೆಯನ್ನೇ ಒತ್ತುವರಿ ಮಾಡಲಾಗಿದೆ. ಮೋರಿ ದಾಟಿ ಹೋಗುವ ಪರಿಸ್ಥಿತಿ ಬಂದಿದೆ. ಎಸ್ಡಬ್ಲ್ಯೂಡಿ ಪಕ್ಕದಲ್ಲೇ ಶಾಲೆಯಿದೆ. ಹಲವಾರು ಶಾಲೆಗಳಿಗೆ ಸ್ಥಳ ಹಾಗೂ ಅನುದಾನ ಕೊರತೆ ಇದೆ ಎಂದು ತಿಳಿಸಿದರು.
ಇದನ್ನೂ ಓದಿ: ರೇವಣ್ಣ ಮತ ಅಸಿಂಧುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ