ಬೆಂಗಳೂರು: ನಕಲಿ ಕಾಲ್ ಸೆಂಟರ್ ತೆರೆದು ಅಮೆರಿಕ ಪ್ರಜೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಬೃಹತ್ ಜಾಲವನ್ನು ವೈಟ್ ಫೀಲ್ಡ್ ಉಪವಿಭಾಗದ ಪೊಲೀಸರು ಪತ್ತೆ ಹಚ್ಚಿದ್ದಾರೆ.
11 ಆರೋಪಿಗಳು ಅರೆಸ್ಟ್: ಕಾಲ್‌ಸೆಂಟರ್ ಸೋಗಿನಲ್ಲಿ ಅಮೆರಿಕ ಪ್ರಜೆಗಳನ್ನು ಟ್ರ್ಯಾಪ್ ಮಾಡಿ ಆನ್ಲೈನ್ ಮುಖಾಂತರ ಕಳೆದ ಎರಡು ವರ್ಷಗಳಿಂದ ಕೋಟಿಗಟ್ಟಲೇ ವಂಚಿಸಿದ್ದ ಗುಜರಾತ್ ಮೂಲದ ರಿಷಿವ್ಯಾಸ್ ಪ್ರತೀಕ್, ಪರೀಶ್, ಹೇತ್ ಪಟೇಲ್, ಕಿರಣ್, ಸೈಯ್ಯದ್ ಸೇರಿ 11 ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೂರಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಸ್ತುಗಳು ಜಪ್ತಿ: ಕಾರ್ಯಾಚರಣೆಯಿಂದ 2 ಕೋಟಿ ಬೆಲೆಯ 127 ಕಂಪ್ಯೂಟರ್ಗಳು, 4 ಲ್ಯಾಪ್ಟಾಪ್, 150 ಹೆಡ್ ಫೋನ್, 10 ಇಂಟರ್ನಲ್ ಹಾರ್ಡ್ ಡಿಸ್ಕ್, ಆ್ಯಪಲ್ ಕಂಪನಿಯ 6 ಮೊಬೈಲ್ಗಳು, 3 ಕಾರು, 2 ಶಾಲಾ ವಾಹನ, ಟಿಟಿ ವಾಹನ ಹಾಗೂ 18 ಲಕ್ಷ ರೂಪಾಯಿ ನಗದು ಜಪ್ತಿ ಮಾಡಿಕೊಂಡಿದ್ದಾರೆ.
ಮೋಸ ಮಾಡಿದ್ದು ಹೀಗೆ.. ವೈಟ್ ಫೀಲ್ಡ್ನ ಗಾಯತ್ರಿ ಟೆಕ್ ಪಾರ್ಕ್ನಲ್ಲಿ ಎಥಿಕಲ್ ಇನ್ ಫೋ ಪ್ರೈ.ಲಿ ಹೆಸರಿನಲ್ಲಿ ಕಂಪನಿ ತೆರದಿದ್ದ ಆರೋಪಿಗಳು ನೂರಾರು ಟೆಲಿಕಾಲರ್ಗಳ ಮೂಲಕ ಅಮೆರಿಕ ಪ್ರಜೆಗಳನ್ನು ಸಂಪರ್ಕ ಮಾಡುತ್ತಿದ್ದರು. ನಿಮ್ಮ ಖಾತೆಯಿಂದ ಹಣ ವರ್ಗಾವಣೆ ಆಗಿದೆಯಾ? ಅಂತ ಮಾತು ಶುರು ಮಾಡ್ತಿದ್ದ ಆರೋಪಿಗಳು ಹಣ ವಾಪಸ್ ಬರಬೇಕು ಅಂದ್ರೆ ಒಂದಷ್ಟು ಪ್ರೊಸಿಜರ್ ಫಾಲೋ ಮಾಡಬೇಕು ಎಂದು ಹೇಳಿ, ಹಂತ ಹಂತವಾಗಿ ಬ್ಯಾಂಕ್ ಹೆಸರನ್ನು ಬಳಕೆ ಮಾಡಿ ಗ್ರಾಹಕರಿಂದ ಅಮೆಜಾನ್ನಲ್ಲಿ ಲಕ್ಷಾಂತರ ಮೌಲ್ಯದ ಗಿಫ್ಟ್ ಕಾರ್ಡ್ ಗೆ ಖರೀದಿ ಮಾಡಿಸಿ ಹಣ ಸಂಪಾದನೆ ಮಾಡುತ್ತಿದ್ದರು.
ಸಿಐಡಿ ತನಿಖೆ? ಪೊಲೀಸರು ಅಮೆರಿಕ ರಾಯಭಾರಿ ಬಳಿ ಮಾಹಿತಿ ಪಡೆಯಲು ಮುಂದಾಗಿದ್ದು, ಆರೋಪಿಗಳು ಯುಎಸ್ಎ ಪ್ರಜೆಗಳನ್ನು ಟಾರ್ಗೆಟ್ ಮಾಡ್ತಿದ್ದ ಉದ್ದೇಶ ಏನು. ಇವರಿಗೆ ಈ ನಂಬರ್ ಯಾರು ಕೊಡುತ್ತಿದ್ದರು ಎಂದು ವಿಚಾರಣೆ ನಡೆಸ್ತಿದ್ದಾರೆ. ಪ್ರಕರಣ ಸಿಐಡಿ ಹೆಗಲಿಗೆ ಹೋಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಹರ್ಷ ಹತ್ಯೆ ಆರೋಪಿಗಳಿಂದ ಜೈಲಿನಿಂದಲೇ ವಿಡಿಯೋ ಕರೆ: ಎಫ್ಐಆರ್ ದಾಖಲು
ವೈಟ್ ಫೀಲ್ಡ್ ಮತ್ತು ಮಹದೇವಪುರ ಬಳಿ ಎರಡು ಕಾಲ್ ಸೆಂಟರ್ಗಳು ಇರುವುದು ಬಯಲಿಗೆ ಬಂದಿದೆ. ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಂಪನಿಯ ಬಹುತೇಕ ಉದ್ಯೋಗಿಗಳಿಗೆ ವಂಚನೆ ಬಗ್ಗೆ ತಿಳಿದಿಲ್ಲ ಎಂದು ಹೇಳಲಾಗುತ್ತಿದೆ.
ನೌಕರರಿಗೆ ನಗದು ರೂಪದಲ್ಲೇ ಕಂಪನಿಗಳು ಸಂಬಳ ನೀಡುತ್ತಿತ್ತು. ಕಾಲ್‌ಸೆಂಟರ್ ಉದ್ಯೋಗಿಗಳನ್ನು ಶಾಲಾ ವಾಹನದಲ್ಲಿ ಡ್ರಾಪ್ ಅಂಡ್ ಪಿಕಪ್ ಮಾಡುತ್ತಿದ್ದರು. ಥಾಯ್ಲೆಂಡ್ ಹಾಗೂ ಹಾಂಕಾಂಗ್ಗಳಲ್ಲಿ ತೆರೆದಿದ್ದ ಬ್ಯಾಂಕ್ ಅಕೌಂಟ್ ಗಳಿಗೆ ಆರೋಪಿಗಳು ಅಕ್ರಮದ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು. ಹವಾಲಾ ಮುಖಾಂತರ ಭಾರತಕ್ಕೆ ನಗದು ರೂಪದಲ್ಲಿ ಹಣ ತರಿಸಿಕೊಂಡು ಉದ್ಯೋಗಿಗಳಿಗೆ ಸಂಬಳ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.