ಬೆಂಗಳೂರು: ರಾಜ್ಯದ ಆನೆ ಶಿಬಿರಗಳಲ್ಲಿ11 ಆನೆಗಳು ಅನಾರೋಗ್ಯ ಸೇರಿದಂತೆ ಇನ್ನಿತರ ಕಾರಣಗಳಿಂದ ಸಾವನ್ನಪ್ಪಿವೆ ಎಂದು ಅರಣ್ಯ ಇಲಾಖೆಯು ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಈ ಕುರಿತು ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿಗಳ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಸರ್ಕಾರದ ಪರ ವಾದಿಸಿದ ವಕೀಲರು, ಸದ್ಯ ರಾಜ್ಯದ ಆನೆ ಶಿಬಿರದಲ್ಲಿ 100 ಆನೆಗಳಿದ್ದು, ಅನಾರೋಗ್ಯಗೊಂಡ ಆನೆಗಳಿಗೆ ಚಿಕಿತ್ಸೆ ನೀಡಲು ಮೂವರು ಪಶು ವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ದುಬಾರೆ ಆನೆ ಶಿಬಿರದಲ್ಲಿದ್ದ ಸೂರ್ಯ ಎಂಬ ಆನೆಯ ಕಾಲಿಗೆ ಪೆಟ್ಟು ಬಿದ್ದು ಸಾವನ್ನಪ್ಪಿತ್ತು. ರಂಗಾ ಎಂಬ ಆನೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಸಾವನ್ನಪ್ಪಿದರೆ, ಉಳಿದ ಆನೆಗಳು ಅನಾರೋಗ್ಯದ ಸಮಸ್ಯೆಯಿಂದಾಗಿ ಸಾವನ್ನಪ್ಪಿವೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು, ಈ ಬಗ್ಗೆ ತಕರಾರು ಇದ್ರೆ ಮುಂದಿನ ವಿಚಾರಣೆ ವೇಳೆ ತಿಳಿಸುವಂತೆ ಅರ್ಜಿದಾರರಿಗೆ ಸೂಚಿಸಿತು.