ದೇವನಹಳ್ಳಿ : ದುಬೈನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಆಫ್ರಿಕಾ ದೇಶದ ವ್ಯಕ್ತಿ ಅನುಮಾಸ್ಪದವಾಗಿ ಕಂಡು ಬಂದ ಹಿನ್ನೆಲೆ ಡಿಆರ್ಐ ಅಧಿಕಾರಿಗಳು ಆತನನ್ನ ಬಂಧಿಸಿದ್ದಾರೆ. ಸ್ಕ್ಯಾನಿಂಗ್ ಮಾಡಿದ್ದಾಗ ಆತನ ಹೊಟ್ಟೆಯಲ್ಲಿ 11 ಕೋಟಿ ರೂ. ಮೌಲ್ಯದ 1.25 ಕೆಜಿ ತೂಕದ ಕೊಕೇನ್ ಕ್ಯಾಪ್ಸುಲ್ ಇರುವುದು ಪತ್ತೆಯಾಗಿದೆ.
ಆಗಸ್ಟ್ 19ರಂದು ಜೋಹನ್ಸ್ ಬರ್ಗ್ ನಿಂದ ದುಬೈ ಮೂಲಕ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಫ್ರಿಕಾ ದೇಶದ ವ್ಯಕ್ತಿ ಬಂದಿದ್ದಾನೆ. ಈತ ತನ್ನ ಏರ್ ಟಿಕೆಟ್ ಪ್ಯಾಕೇಜ್ನಲ್ಲಿ ಕೊಡಲಾಗುವ ಉಚಿತ ಆಹಾರ ನೀರು ಮತ್ತು ತಂಪು ಪಾನೀಯ ಸ್ವೀಕರಿಸದೆ ನಿರಾಕರಿಸಿದ್ದ.
ಪ್ರಯಾಣಿಕರ ಬಗ್ಗೆ ಗಮನ ಇಟ್ಟಿದ್ದ ಆರ್ಥಿಕ ಗುಪ್ತಚಾರ ಇಲಾಖೆ (ಡಿಆರ್ ಐ) ಅಧಿಕಾರಿಗಳಿಗೆ ಈತನ ವರ್ತನೆ ಸಂಶಯಕ್ಕೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಕೆಐಎಎಲ್ಗೆ ಬಂದ ಈತನನ್ನು ವಶಕ್ಕೆ ಪಡೆದ ಅಧಿಕಾರಿಗಳು ತಪಾಸಣೆ ನಡೆಸಿದ್ದಾಗ ಮಾದಕ ದ್ರವ್ಯ ಪತ್ತೆಯಾಗಿದ್ದಿಲ್ಲ. ನಂತರ ಸ್ಕ್ಯಾನಿಂಗ್ ಮಾಡಿದಾಗ ಆತನ ಹೊಟ್ಟೆಯಲ್ಲಿ ಅನುಮಾನಸ್ಪದ ವಸ್ತುಗಳು ಇರುವುದು ಪತ್ತೆಯಾಗಿತ್ತು.
ನಂತರ ವಿಕ್ಟೋರಿಯಾ ಆಸ್ಪತ್ರೆ ಕಳುಹಿಸಿ ವೈದ್ಯರ ಸಹಾಯದಿಂದ ಆತನ ಹೊಟ್ಟೆಯಲ್ಲಿದ್ದ ವಸ್ತುಗಳನ್ನ ಹೊರ ತೆಗೆದಾಗ, 1.25 ಕೆಜಿ ತೂಕದ 11 ಕೋಟಿ ಮೌಲ್ಯದ ಕೊಕೇನ್ ಕ್ಯಾಪ್ಸುಲ್ ಪತ್ತೆಯಾಗಿವೆ.
ದಕ್ಷಿಣ ಆಫ್ರಿಕಾದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಕೊಕೇನ್ ಕ್ಯಾಪ್ಸುಲ್ಗಳನ್ನ ನುಂಗಿಸಿ ದುಬೈ ಮಾರ್ಗವಾಗಿ ಬೆಂಗಳೂರಿಗೆ ಕಳುಹಿಸಿದ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿದ್ದು, ಅಲ್ಲಿ ಉಳಿದುಕೊಳ್ಳುವಂತೆ ಹೇಳಿದ್ದಾರೆ.
ಆ ರೂಮ್‍ಗೆ ಅಪರಿಚಿತ ವ್ಯಕ್ತಿ ಬಂದು ಮೊಬೈಲ್ ಫೋನ್ ಕೊಡುತ್ತಾನೆ, ಅದರಲ್ಲಿ ಬರುವ ಸೂಚನೆ ಪಾಲನೆ ಮಾಡಿದ್ರೆ, ಹೊಟ್ಟೆಯಲ್ಲಿರುವ ಕ್ಯಾಪ್ಸುಲ್ ಹೊರ ತೆಗೆದು ಹಣ ನೀಡಲಾಗುತ್ತೆ. ಅಲ್ಲದೆ, ಪ್ರಯಾಣದ ಸಂಪೂರ್ಣ ವೆಚ್ಚವನ್ನ ಅವರೇ ನೋಡಿಕೊಂಡಿದ್ದರು ಎಂದು ಪೆಡ್ಲರ್ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ.