ಬೆಂಗಳೂರು: ಪ್ರತಿನಿತ್ಯ ಅಲ್ಲೊಂದು ಇಲ್ಲೊಂದು ಕೋವಿಡ್ ಪ್ರಕರಣ ಕಂಡು ಬರುವ ಮೂಲಕ ಕೊಂಚ ನಿರಾಳರಾಗಿದ್ದ ರಾಜಧಾನಿಯ ನಿವಾಸಿಗಳನ್ನು ಬೊಮ್ಮನಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ನೂರಕ್ಕೂ ಅಧಿಕ ಮಂದಿಗೆ ಕೋವಿಡ್ ತಗುಲಿರುವ ವಿಚಾರ ಬೆಚ್ಚಿ ಬೀಳಿಸಿದೆ.
ಬೊಮ್ಮನಹಳ್ಳಿಯ ಎಸ್.ಎನ್.ಎನ್ ರಾಜ್ ಲೇಕ್ ವ್ಯೂ ಅಪಾರ್ಟ್ಮೆಂಟ್ನ ಒಟ್ಟು 109 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈ ಅಪಾರ್ಟ್ಮೆಂಟ್ನ 456 ಫ್ಲಾಟ್ಗಳಲ್ಲಿ 1,050 ಮಂದಿ ವಾಸವಿದ್ದು, ಡಿ. 6ರಂದು ಡೆಹ್ರಾಡೂನ್ನಿಂದ ಆಗಮಿಸಿದವರೊಂದಿಗೆ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಗಾಳಿಗೆ ತೂರಿ 2 ಪಾರ್ಟಿಗಳನ್ನು ಆಯೋಜಿಸಲಾಗಿತ್ತು. ಆ ಬಳಿಕ ಕೆಲವರಲ್ಲಿ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿತ್ತು. ಹೀಗಾಗಿ ಸ್ವಯಂ ಪ್ರೇರಿತರಾಗಿ ಪರೀಕ್ಷೆಗೆ ಒಳಗಾಗಿದ್ದರು. ವರದಿ ಬಂದ ಬಳಿಕ ಫೆ. 11ರಂದು 7 ಮಂದಿಯಲ್ಲಿ, ಫೆ. 12ರಂದು 17 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಬಳಿಕ ಬಿಬಿಎಂಪಿ ಅಧಿಕಾರಿಗಳು ಅಪಾರ್ಟ್ಮೆಂಟ್ ನಿವಾಸಿಗಳನ್ನು ಸಾಮೂಹಿಕ ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದರು. ಈ ವೇಳೆ ಒಂದು ಬಾರಿ 36 ಜನರಿಗೆ ನಂತರ 67 ಜನರಲ್ಲಿ ಹಾಗೂ ನಿನ್ನೆ 6 ಜನರಿಗೆ ಸೋಂಕು ದೃಢಪಟ್ಟಿದೆ. ಅಪಾರ್ಟ್ಮೆಂಟ್ ನಿವಾಸಿಗಳ ಪೈಕಿ ಒಟ್ಟು 109 ಜನರಲ್ಲಿ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ ಎಂದು ಬಿಬಿಎಂಪಿ ಸಾರ್ವಜನಿಕ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ತಿಳಿಸಿದ್ದಾರೆ.
109 ಜನರ ಪೈಕಿ 96 ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಮಕ್ಕಳೆಲ್ಲರೂ 10 ವರ್ಷ ಮೇಲ್ಪಟ್ಟವರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ಅಪಾರ್ಟ್ಮೆಂಟ್ಅನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಅನಿವಾರ್ಯ ಕಾರಣಗಳಿಗೆ ಮಾತ್ರ ಓಡಾಡಲು ಅವಾಕಾಶವಿದ್ದು, ಸೀಲ್ ಡೌನ್ ಮಾಡಿಲ್ಲ.
ಓದಿ : ಸಿಲಿಕಾನ್ ಸಿಟಿಯ ಅಪಾರ್ಟ್ಮೆಂಟ್ವೊಂದರಲ್ಲಿ 103 ಮಂದಿಗೆ ಕೊರೊನಾ ಸೋಂಕು
ಅಪಾರ್ಟ್ಮೆಂಟ್ ಒಳಭಾಗದಲ್ಲಿರುವ ಈಜುಕೊಳ, ವ್ಯಾಯಾಮ ಶಾಲೆ, ಸಭೆ ಸಮಾರಂಭ ಸೇರುವ ಪಾರ್ಟಿ ಹಾಲ್ಗಳನ್ನು ಬಂದ್ ಮಾಡಲಾಗಿದೆ. ಅನಗತ್ಯವಾಗಿ ಓಡಾಡದಂತೆ ಸೂಚಿಸಲಾಗಿದ್ದು, ಸಿಸಿಟಿವಿ ಕಣ್ಗಾವಲು ಇಡಲಾಗಿದೆ. ತುರ್ತು ಚಿಕಿತ್ಸೆಗೆ ಬೇಕಾದ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಲಾಗಿದೆ. ಅಪಾರ್ಟ್ಮೆಂಟ್ ಒಳಗಿರುವ ಒಳ ಕ್ರಿಡಾಂಗಣ, ಸ್ವಿಮ್ಮಿಂಗ್ ಪೂಲ್ ಸುತ್ತಮುತ್ತ ಹಾಗೂ ಸೂಪರ್ ಮಾರ್ಕೆಟ್ಗೆ ಸ್ಯಾನಿಟೈಸ್ ಮಾಡಿ ಸೀಲ್ ಡೌನ್ ಮಾಡಲಾಗಿದೆ. ಅಪಾರ್ಟ್ಮೆಂಟ್ ನಿವಾಸಿಗಳಿಗೆ ಪಾಲಿಕೆಯೇ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿದೆ. ಮುಂದಿನ ಹದಿನಾಲ್ಕು ದಿನಗಳ ಕಾಲ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಕ್ವಾರಂಟೈನಲ್ಲಿ ಇರುವಂತೆ ಸೂಚಿಸಲಾಗಿದೆ. ಪಾಲಿಕೆಯ 6 ಕ್ಯಾಂಪ್ಗಳ ಮೂಲಕ 1,050 ನಿವಾಸಿಗಳ ಟೆಸ್ಟಿಂಗ್ ಕೂಡ ನಡೆಸಲಾಗಿದೆ.
ಎರಡನೇ ಅಲೆ ಭೀತಿ: ಸಂಪೂರ್ಣ ಕಡಿಮೆಯಾಗಿದ್ದ ಕೋವಿಡ್ ಪ್ರಕರಣ ಮತ್ತೆ ಕಾಣಿಸಿಕೊಂಡಿದ್ದು, ಎರಡನೇ ಅಲೆಯೇ ಎಂಬ ಭೀತಿ ಜನರಲ್ಲಿ ಶುರುವಾಗಿದೆ. ಆದರೆ ಇಲ್ಲಿ ಕ್ಲಸ್ಟರ್ ಮಟ್ಟದಲ್ಲಿ ಮಾತ್ರ ಪ್ರಕರಣಗಳು ಕಾಣಿಸಿಕೊಂಡಿವೆ. ಇಡೀ ನಗರದಲ್ಲಿ ಕಂಡು ಬರುತ್ತಿರುವ ಪ್ರತಿನಿತ್ಯದ ಪ್ರಕರಣಗಳಲ್ಲಿ ಏರಿಕೆ ಆಗಿಲ್ಲ. ಇಂದೂ ಕೂಡ 256 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಇನ್ನೂ ಎರಡನೇ ಅಲೆ ಪ್ರಾರಂಭವಾಗಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಪ್ರಕರಣ ಹೆಚ್ಚಾಗ್ತಿದೆ. ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದ 21 ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣ ಕಂಡು ಬರುತ್ತಿದೆ. ಆತಂಕಕಾರಿ ವಿಚಾರ ಎಂದರೆ, ಮಹಾರಾಷ್ಟ್ರದಲ್ಲಿ ಅತೀ ವೇಗವಾಗಿ ಹಬ್ಬುವ ಇಂಗ್ಲೆಂಡ್, ಸೌತ್ ಆಫ್ರಿಕಾ, ಬ್ರೆಜಿಲ್ನ ರೂಪಾಂತರಿ ಪ್ರಕರಣಗಳು ಕಂಡು ಬರುತ್ತಿವೆ. ಹೀಗಾಗಿ ಕೇರಳ, ಮಹಾರಾಷ್ಟ್ರದಿಂದ ರಾಜ್ಯದಲ್ಲೂ ಹಬ್ಬುವ ಸಾಧ್ಯತೆ ಇದೆ. ಈಗಲೇ ಎಚ್ಚೆತ್ತುಕೊಳ್ಳಬೇಕು. ಈ ಸಂಬಂಧ ಪ್ರತಿ ದಿನ ಸಭೆ ನಡೆಸಲಾಗ್ತಿದೆ ಎಂದು ತಿಳಿಸಿದ್ದಾರೆ.
ಮಂಜುಶ್ರೀ ನರ್ಸಿಂಗ್ ಕಾಲೇಜ್ನಲ್ಲಿ ಕೇರಳದಿಂದ ಬಂದ 210 ವಿದ್ಯಾರ್ಥಿಗಳಲ್ಲಿ 40 ಜನರಿಗೆ ಪಾಸಿಟಿವ್ ಬಂದಿದ್ದು, ಬೊಮ್ಮನಹಳ್ಳಿ ಅಪಾರ್ಟ್ಮೆಂಟ್ನಲ್ಲಿ 1,050 ಜನರ ಪೈಕಿ 106 ಮಂದಿಗೆ ಪಾಸಿಟಿವ್ ಬಂದಿದೆ. ಈ ರೀತಿ ಕ್ಲಸ್ಟರ್ಗಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗಿವೆ ವಿನಾ ಇಡೀ ನಗರದಲ್ಲಿ ಹಬ್ಬಿಲ್ಲ. ಹೀಗಾಗಿ ಮುನ್ನೆಚ್ಚರಿಕೆ ಅಗತ್ಯ ಎಂದರು.
ರಾಜ್ಯದ ಗಡಿ ಭಾಗಗಳಲ್ಲಿ ಕೆಲವು ನಿಬಂಧನೆ ವಿಧಿಸಲಾಗಿದೆ. ಕೇರಳದಿಂದ ಬರುವವರು 72 ಗಂಟೆಗಳಲ್ಲಿ ಮಾಡಿಸಿದ ನೆಗೆಟಿವ್ ಸರ್ಟಿಫಿಕೇಟ್ ತೋರಿಸಬೇಕು. ಇಲ್ಲವಾದಲ್ಲಿ ಕ್ವಾರಂಟೈನ್ನಲ್ಲಿದ್ದು, ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಬೇಕು. ಈ ವೈರಸ್ ತಳಿ ಪತ್ತೆಗೆ ನಿಮ್ಹಾನ್ಸ್ಗೆ ಟೆಸ್ಟಿಂಗ್ಗೂ ಕಳಿಸಲಾಗುತ್ತದೆ. ಮಹಾರಾಷ್ಟ್ರದದಿಂದ ಬರುವವರಿಗೂ ಇದೇ ನಿಬಂಧನೆ ಇರಲಿದೆ. ಸದ್ಯದಲ್ಲೇ ರಾಜ್ಯ ಸರ್ಕಾರದಿಂದ ಆದೇಶ ಹೊರ ಬೀಳಲಿದೆ. ಎಲ್ಲಾ ಕಡೆ ಸರ್ಕಾರದ ಮಾರ್ಗಸೂಚಿಗಳನ್ನು ಬಿಬಿಎಂಪಿ ಹೆಚ್ಚು ಪ್ರಚಾರ ಮಾಡಲಿದೆ ಎಂದು ಹೇಳಿದರು.