ಬೆಂಗಳೂರು: ಕೊರೊನಾ ವೈರಸ್ ಭಯ ಬೇಡ ಕಾಳಜಿ ವಹಿಸಿ ಅಂತ ಸರ್ಕಾರ, ಆರೋಗ್ಯ ಇಲಾಖೆ, ವೈದ್ಯ ಲೋಕ ಜಾಗೃತಿ ಮೂಡಿಸುತ್ತಲೇ ಇದೆ. ಆದರೆ, ಕೊರೊನಾ ಭಯಕ್ಕೆ ಅದೆಷ್ಟೋ ಜನ ಆಸ್ಪತ್ರೆ ಮೆಟ್ಟಿಲು ಹತ್ತುವುದಕ್ಕೂ ಹಿಂಜರಿಯುತ್ತಾರೆ. ಆದರೆ, ವೈದ್ಯ ಲೋಕಕ್ಕೆ ಸಂತಸ ಮೂಡಿಸಿದ್ದಾರೆ ಈ ಅಜ್ಜಿ.
ಕರ್ನಾಟಕದಲ್ಲಿ ಇವರೇ ಅತ್ಯಂತ ಹಿರಿಯ ವಯಸ್ಸಿನ ಕೊರೊನಾ ರೋಗಿ, ಗುಣಮುಖರಾಗಿ ಡಿಸ್ಜಾರ್ಜ್ ಆಗಿದ್ದಾರೆ. 'ಮಾರ್ಸಿಲಿನ್ ಸಾಲ್ಡಾನಾ' ಎಂಬ 99 ವರ್ಷ ತುಂಬಿ 100ನೇ ವಸಂತಕ್ಕೆ ಕಾಲಿಟ್ಟಿದ್ದ ವೃದ್ಧೆಗೆ ಕೊರೊನಾ ಕಾಡಿತ್ತು. ಜೂನ್ 18ಕ್ಕೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಿಯಾಗಿರುವ ವೃದ್ಧೆಯ ಪುತ್ರ - ಸೊಸೆ - ಮೊಮ್ಮಕ್ಕಳಿಗೆ ಸೋಂಕು ತಗುಲಿತ್ತು.
ಇತ್ತ ವಿಕ್ಟೋರಿಯಾ ಟ್ರಾಮ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆ, ಕೇವಲ 9 ದಿನಕ್ಕೆ ಗುಣಮುಖರಾಗಿ ಡಿಸ್ಜಾರ್ಜ್ ಆಗಿದ್ದಾರೆ. ಅಂದ ಹಾಗೇ ಆ ವೃದ್ಧೆ ತಮ್ಮ ಹುಟ್ಟುಹಬ್ಬದ ದಿನವೇ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಕೊರೊನಾವನ್ನ ಬಗ್ಗು ಬಡಿದು, ನಿನ್ನೆ ಸಂಜೆ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ವೃದ್ಧೆ ಗುಣಮುಖ ಆಗಿರುವುದು ವೈದ್ಯಲೋಕಕ್ಕೆ ಸಂತಸ ತಂದಿದೆ. ವಿಕ್ಟೋರಿಯಾ ಟ್ರಾಮ್ ಕೇರ್ ಸೆಂಟರ್‌ನಲ್ಲಿರುವ ರೋಗಿಗಳಿಗೆಲ್ಲ ಅಜ್ಜಿ ಧೈರ್ಯ ಹೇಳಿ ಬಂದಿದ್ದಾರೆ.