ಬೆಂಗಳೂರು : ನಗರದ ಅಪೋಲೊ ಆಸ್ಪತ್ರೆ ರೋಬೊಟ್ ನೆರವಿನ ಹೃದಯ ಶಸ್ತ್ರಚಿಕಿತ್ಸೆ ಘಟಕದಲ್ಲಿ 100 ರೋಬೊಟಿಕ್ಸ್ ಹೃದಯ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಅಪೋಲೊ ಹಾಸ್ಪಿಟಲ್ಸ್ ಬೆಂಗಳೂರು ಪ್ರಕಟಿಸಿದೆ.
ಆಸ್ಪತ್ರೆಯ ಶಸ್ತ್ರಚಿಕಿತ್ಸಕರ ತಂಡವು "ಡ ವಿಂಚಿ ರೋಬೊಟಿಕ್" ಸೌಲಭ್ಯದ ನೆರವಿನಿಂದ ತುಂಬ ಸಂಕೀರ್ಣವಾಗಿದ್ದ ಮಿಟ್ರಲ್ ವಾಲ್ಸ್‌ನ ಮಿನಿಮಲಿ ಇನ್‌ವ್ಯಾಸಿವ್ ಕಾರ್ಡಿಯಾಕ್ ಸರ್ಜರಿಯನ್ನು ಕೇವಲ 70 ನಿಮಿಷಗಳಲ್ಲಿ ಪೂರ್ಣಗೊಳಿಸಿರುವುದಾಗಿಯೂ ಆಸ್ಪತ್ರೆ ಹೇಳಿದೆ.
ಹೃದಯ ಮತ್ತು ರಕ್ತನಾಳಗಳ ಶಸ್ತ್ರಚಿಕಿತ್ಸಕ, ರೋಬೊಟಿಕ್ ಕಾರ್ಡಿಯಾಕ್ ಸರ್ಜರಿ ಯುನಿಟ್‌ನ ಮುಖ್ಯಸ್ಥ ಮತ್ತು ಹಿರಿಯ ಸಲಹೆಗಾರ ಡಾ. ಸತ್ಯಕಿ ನಂಬಾಳ ಅವರು ಈ ಬಗ್ಗೆ ಮಾತನಾಡಿ, 'ಹೃದಯರಕ್ತನಾಳದ ಕಾಯಿಲೆಗಳು ರೋಗಿಗಳ ಬದುಕಿನ ಅತ್ಯಂತ ನಿರ್ಣಾಯಕ ವರ್ಷಗಳಲ್ಲಿ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಈ ಮೂಲಕ ವಿನಾಶಕಾರಿಯಾದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಉಂಟು ಮಾಡುತ್ತವೆ.
ರೋಬೊಟ್ ನೆರವಿನ ಹೃದಯ ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ಗರಿಷ್ಠ ಮಟ್ಟದ ಸಮರ್ಪಣೆ ಮತ್ತು ಪೂರ್ವ ಸಿದ್ಧತೆಗಳ ಅಗತ್ಯ ಇರುತ್ತದೆ. 2019ರ ಅಂತ್ಯದ ವೇಳೆಗೆ ಆರಂಭಗೊಂಡಿದ್ದ ಈ ಸೌಲಭ್ಯ ಈವರೆಗೆ 100 ರೋಬೊಟಿಕ್ ಹೃದಯ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸಿದ ಭಾರತದ ಮೊದಲ ಆಸ್ಪತ್ರೆ ಎಂಬ ಹೆಮ್ಮೆ ನಮ್ಮದಾಗಿದೆ.
ಎದೆಯ ಎಲುಬನ್ನು ವಿಭಜಿಸುವ ಸಾಂಪ್ರದಾಯಿಕ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ, ಡ ವಿಂಚಿ ಕ್ಸಿ (da Vinci Xi) ನವೀನ ತಂತ್ರಜ್ಞಾನವು ಸಂಕೀರ್ಣವಾದ ಹೃದಯ ರಕ್ತನಾಳದ ಶಸ್ತ್ರಚಿಕಿತ್ಸೆಗಳನ್ನು ಸಣ್ಣ ಭೇದನದ ಮೂಲಕ ಮತ್ತು ನಿಖರ ಚಲನೆಯ ನಿಯಂತ್ರಣದ ಮೂಲಕ ನೆರವೇರಿಸಲು ನೆರವಾಗುತ್ತದೆ ಎಂದರು.
'ಇದಕ್ಕೆ ಪೂರಕವಾಗಿ ಹೇಳುವುದಾದರೆ, ಸುಸ್ಪಷ್ಟ ಚಿತ್ರಣ ನೀಡುವ ಹೈ-ಡೆಫಿನಿಷನ್ ಕ್ಯಾಮೆರಾ, ಕನ್ಸಲ್ ಸ್ಕಿನ್‌ನಲ್ಲಿ ಶಸ್ತ್ರಚಿಕಿತ್ಸಕರಿಗೆ ಎದೆಯ ಸ್ಪಷ್ಟ, ಮೂರು ಆಯಾಮದ (3D) ವಿವರಗಳನ್ನು ಒದಗಿಸುತ್ತದೆ.
ಈ ಸೌಲಭ್ಯದ ಸಹಾಯದಿಂದ, ವೇಗದ ರೋಬೊಟಿಕ್ ಕಾಂಪ್ಲೆಕ್ಸ್ ಮಿಟಲ್ ವಾಲ್ಟ್ ಅನ್ನು ನಾವು ಜಾಗತಿಕ ಮಾನದಂಡಗಳಿಗೆ ವಿರುದ್ಧವಾಗಿ 70 ನಿಮಿಷಗಳಲ್ಲಿ ದುರಸ್ತಿ ನಡೆಸುವಲ್ಲಿ ಯಶಸ್ವಿಯಾಗಿದ್ದೇವೆ. ಮುಂಬರುವ ದಿನಗಳಲ್ಲಿ ಇಂತಹ ಇನ್ನೂ ಹೆಚ್ಚಿನ ಮೈಲುಗಲ್ಲುಗಳನ್ನು ಸಾಧಿಸುವ ಬಗ್ಗೆ ನಾವು ಆಶಾವಾದಿಗಳಾಗಿದ್ದೇವೆ' ಎಂದು ಹೇಳಿದ್ದಾರೆ.
ರೋಬೊಟಿಕ್ ಹೃದಯ ಶಸ್ತ್ರಚಿಕಿತ್ಸೆಯು ಕನಿಷ್ಠ ಆಕ್ರಮಣಕಾರಿ ಪ್ರಕ್ರಿಯೆಯಾಗಿದೆ. ಇದು ರೋಗಿಗಳಿಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗಿಂತ ವೇಗವಾಗಿ ತಮ್ಮ ದೈನಂದಿನ ಜೀವನದ ಚಟುವಟಿಕೆಗಳಿಗೆ ಮರಳಲು ಸಹಾಯ ಮಾಡುತ್ತದೆ.
ಡ ವಿಂಚಿ ಕ್ಸಿ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ಶಸ್ತ್ರ ಚಿಕಿತ್ಸಕರು ಪೋರ್ಟ್ಸ್ ಎಂದು ಕರೆಯುವ 8 ಎಂಎಂ ರಂಧ್ರಗಳು ಮತ್ತು ವರ್ಧಿತ ಇಡಿ ಹೈ ಡೆಫಿನಿಷನ್ ದೃಶ್ಯ ಹಾಗೂ ಶಸ್ತ್ರಚಿಕಿತ್ಸೆಯಲ್ಲಿ ಮಾನವನ ಕೈ ಚಲನೆಗಿಂತ ಹೆಚ್ಚು ಬಾಗುವ ಮತ್ತು ತಿರುಗಿಸುವ ಸಣ್ಣ ಮಣಿಕಟ್ಟಿನ ಉಪಕರಣಗಳನ್ನು ಬಳಸುತ್ತಾರೆ.
ಇದರ ಪರಿಣಾಮವಾಗಿ, ಶಸ್ತ್ರಚಿಕಿತ್ಸಕರು, ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಉತ್ತಮ ದೃಷ್ಟಿ, ನಿಖರತೆ ಮತ್ತು ನಿಯಂತ್ರಣ ಹೊಂದಲು ಸಾಧ್ಯವಾಗಲಿದೆ. ಕಡಿಮೆ ನೋವು, ಶಸ್ತ್ರಚಿಕಿತ್ಸೆಯ ನಂತರದ ಕಡಿಮೆ ಗಾಯದ ಸೋಂಕುಗಳು, ಶಸ್ತ್ರಚಿಕಿತ್ಸೆಯ ನಂತರದ ಕನಿಷ್ಟ ಗುರುತುಗಳು ಮತ್ತು ಸುಧಾರಿತ ಉಸಿರಾಟ ಮುಂತಾದವು ಈ ಶಸ್ತ್ರಚಿಕಿತ್ಸೆ ವಿಧಾನದ ಇತರ ಪ್ರಯೋಜನಗಳಲ್ಲಿ ಸೇರಿವೆ.
ಶಸ್ತ್ರ ಚಿಕಿತ್ಸೆ ನಂತರದ ಚೇತರಿಕೆಯು ತ್ವರಿತವಾಗಿರುತ್ತದೆ. ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕಡಿಮೆ ಇರಲಿದೆ. ತ್ವರಿತವಾಗಿ ಚೇತರಿಸಿಕೊಳ್ಳಲು ಸಾಧ್ಯವಿದೆ. ಇದು ಸೋಂಕಿನ ಸಾಧ್ಯತೆಯನ್ನು ಕಡಿಮೆ ಮಾಡುವುದರಿಂದ ಮಧುಮೇಹ ಮತ್ತು ವಯಸ್ಸಾದ ರೋಗಿಗಳಿಗೆ ಇದು ಹೆಚ್ಚು ಸೂಕ್ತ ಚಿಕಿತ್ಸಾ ವಿಧಾನವಾಗಿದೆ.
ಪಾರಂಪರಿಕ ಶಸ್ತ್ರ ಚಿಕಿತ್ಸೆಗಿಂತ ಈ ಚಿಕಿತ್ಸಾ ವೆಚ್ಚ ₹2 ಲಕ್ಷ ಹೆಚ್ಚಾಗಲಿದೆ. ಹಾಗೂ ಅನೇಕ ವಿಮೆ ಸಂಸ್ಥೆಗಳು ಭಾಗಶಃ ಅಥವಾ ಪೂರ್ಣ ಕವರ್ ಮಾಡುತ್ತಾರೆ. ಈ ಚಿಕಿತ್ಸೆ 16 ವರ್ಷದ ಹುಡುಗರಿಂದ 45 ಕೆಜಿ ತೂಕಕ್ಕಿಂತ ಹೆಚ್ಚಿರುವವರಿಗೆ ಮಾಡಬಹುದು.
ಸದ್ಯ ಈ ಚಿಕಿತ್ಸೆ ಅಪೋಲೊ ಆಸ್ಪತ್ರೆಯಲ್ಲಿ ಮಾತ್ರ ಲಭ್ಯವಿದೆ, ಮುಂಬರುವ ಐದು ವರ್ಷದಲ್ಲಿ ಬೇರೆ ಅಸ್ಪತ್ರೆಯವರು ಪ್ರಾರಂಭ ಮಾಡಿದರೆ ಚಿಕಿತ್ಸೆ ವೆಚ್ಚ ಇನ್ನು ಕಡಿಮೆ ಆಗಲಿದೆ ಎಂದು ಹೇಳಿದರು.