ಕನ್ನಡ ಚಿತ್ರರಂಗದಲ್ಲಿ ಜನವರಿ ಮುಗಿದು ಫೆಬ್ರವರಿ ಶುರುವಾಗಿ ಎರಡನೇ ವಾರದತ್ತ ಕಾಲಿಡುತ್ತಿದೆ. ಆದರೆ ಸ್ಯಾಂಡಲ್ ವುಡ್ ನಲ್ಲಿ ಅಂದುಕೊಂಡಂತೆ ಸಿನಿಮಾಗಳು ಪ್ರೇಕ್ಷಕರನ್ನ ಸೆಳೆಯುವಲ್ಲಿ ವಿಫಲವಾಗಿವೆ. ಆದರೆ ವಾರಕ್ಕೆ ಆರು ಏಳು ಚಿತ್ರಗಳು ರಿಲೀಸ್ ಆಗುವ ಮೂಲಕ ಚಿತ್ರಮಂದಿರಗಳಿಂದ ಒಂದೇ ದಿನಕ್ಕೆ ಕಾಲು ಕೀಳುತ್ತಿವೆ. ಹೀಗೆ ಇದ್ದರೂ ಮತ್ತೆ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಬಿಡುಗಡೆ ವಿಚಾರದಲ್ಲಿ ಮತ್ತೆ ದಾಖಲೆ ಬರೆದಿದೆ.
ಜನವರಿ ಮೊದಲ ವಾರದಲ್ಲಿ ಬರೋಬ್ಬರಿ 8 ಸಿನಿಮಾಗಳು ಬಿಡುಗಡೆ ಆಗಿದ್ವು. ಈಗ ಈ ವಾರ ಚಂದನವನದಲ್ಲಿ ಬೆಂಗಳೂರು 69, ಹೊಂದಿಸಿ ಬರೆಯಿಸಿ, ರಂಗಿನಾ ರಾಟೆ, ರೂಪಾಯಿ, ಉತ್ತಮರು, ಒಂದಾನೊಂದು ಕಾಲದಲ್ಲಿ,ಅಂಬಾಸಡರ್, ಲಾಂಗ್ ಡ್ರೈವ್, ಡಿಸೆಂಬರ್ 24, ಲೈಫ್ ಇಷ್ಟನೇ ಸೇರಿ ಬರೋಬ್ಬರಿ 10 ಸಿನಿಮಾಗಳು ಬಿಡುಗಡೆ ಆಗುವ ದಾಖಲೆ ಬರೆಯುತ್ತಿವೆ.
ಹೊಂದಿಸಿ ಬರೆಯಿರಿ: ಈ 10 ಸಿನಿಮಾಗಳಲ್ಲಿ ಸ್ಟಾರ್ ಕಾಸ್ಟ್ ಹಾಗೂ ಒಳ್ಳೆ ಕಂಟೆಂಟ್ ನಿಂದ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಹೊಂದಿಸಿ ಬರೆಯಿರಿ.ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ ಒಳಗೊಂಡ ಕಲಾವಿದರ ಮುಖ್ಯ ಭೂಮಿಕೆಯಲ್ಲಿರೋ ಹೊಂದಿಸಿ ಬರೆಯಿಸಿ ಚಿತ್ರ ಟ್ರೈಲರ್ ಹಾಗು ಹಾಡುಗಳಿಂದ ಒಂದು ಮಟ್ಟಿಗೆ ಸೌಂಡ್ ಮಾಡುತ್ತಿದೆ.
ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನವಿರುವ ಹೊಂದಿಸಿ ಬರೆಯಿರಿ ಐದು ಜನ ಸ್ನೇಹಿತರ ಹನ್ನೆರಡು ವರ್ಷದ ಜರ್ನಿಯ ಕಥೆ.ಈ ಚಿತ್ರದಲ್ಲಿ ಕಾಲೇಜು ನಂತರದ ದಿನಗಳು, ಮದುವೆ ಈ ಜರ್ನಿಯನ್ನು ಒಳಗೊಂಡಿದೆ. ಶಾಂತಿ ಸಾಗರ್ ಹೆಚ್.ಜಿ ಕ್ಯಾಮರಾ ವರ್ಕ್, ಜೋ ಕೋಸ್ಟ ಸಂಗೀತ ನಿರ್ದೇಶನ, ಕೆ. ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಸಾಹಿತ್ಯ ಚಿತ್ರಕ್ಕಿದೆ. ಮಾಸ್ತಿ, ಪ್ರಶಾಂತ್ ರಾಜಪ್ಪ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಬೆಂಗಳೂರು 69:ಈ ಕಾಲೇಜ್ ಯೂತ್ ಸ್ಟೋರಿ ಮಧ್ಯೆ ಟ್ರೈಲರ್ ಹಾಗೂ ಹಾಡುಗಳಿಂದ ಲೈಟ್ ಆಗಿ ಸದ್ದು ಮಾಡುತ್ತಿರುವ ಚಿತ್ರ ಬೆಂಗಳೂರು 69. ಸೈಕೋ ಸಿನಿಮಾ ಖ್ಯಾತಿಯ ಅನಿತಾ ಭಟ್ ಹಾಗು ಪವನ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರೋ ಬೆಂಗಳೂರು 69 ಚಿತ್ರ ಸಸ್ಪೆನ್ಸ್ ಕಮ್ ಥ್ರಿಲ್ಲರ್ ಕಥೆಯನ್ನ ಆಧರಿಸಿದೆ. ಕ್ರಾಂತಿ ಚೈತನ್ಯ ನಿರ್ದೇಶನವಿರುವ ಬೆಂಗಳೂರು 69 ಚಿತ್ರದಲ್ಲಿ ಅನಿತಾ ಭಟ್ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ರೂಪಾಯಿ: ಈ ಮಧ್ಯೆ ಚಿತ್ರದ ಟೈಟಲ್ ನಿಂದ ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆಯುತ್ತಿರೋ ಚಿತ್ರ ರೂಪಾಯಿ. ಬಿಗ್ ಬಾಸ್ ಖ್ಯಾತಿಯ ಕೃತಿ ತಾಪಂಡ ಹಾಗೂ ವಿಜಯ್ ಜಗದಲ್ ಅಭಿನಯದ ರೂಪಾಯಿ ಚಿತ್ರ ಕೂಡ ನಾಳೆ ಬಿಡುಗಡೆ ಆಗುತ್ತಿದೆ. ಯುವ ನಟ ವಿಜಯ್ ಜಗದಲ್ ಅಭಿನಯಿಸುವುದರ ಜೊತೆಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ರಂಗಿನ ರಾಟೆ: ಇನ್ನು ರಾಜೀವ್ ರಾಥೋಡ್, ಭವ್ಯಾ ಆರ್ಆರ್, ದುನಿಯಾ ರಶ್ಮಿ ಅಭಿನಯದ ರಂಗಿನ ರಾಟೆ ಈ ವಾರ ಸ್ಪರ್ಧೆಗೆ ಇಳಿದಿದೆ. ಆರುಮುಗಂ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ ಪ್ರತಾಪ್ ನಾರಾಯಣ್, ರಂಗಾಯಣ ರಘು, ಬಾಲಾ ರಾಜ್ವಾಡಿ, ಕಡ್ಡಿಪುಡಿ ಚಂದ್ರು ಮೊದಲಾದವರು ನಟಿಸಿರುವ ಉತ್ತಮರು ಸಿನಿಮಾ ಕೂಡ ನಾಳೆ ಬಿಡುಗಡೆ ಆಗುತ್ತಿದೆ. ರೋಹಿತ್ ಶ್ರೀನಿವಾಸ್ ನಿರ್ದೇಶನವಿರು ಈ ಚಿತ್ರ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಾ ನೋಡಬೇಕು.
ಡಿಸೆಂಬರ್ 24 : ಈ ಮಧ್ಯೆ ಅಪ್ಪು ಬಡಿಗೇರ್, ರವಿ ಕೆಆರ್ ಪೇಟೆ, ರಘು ಶೆಟ್ಟಿ ಮೊದಲಾದವರು ನಟಿಸಿರುವ, ನಾಗರಾಜ್ ಗೌಡ ನಿರ್ದೇಶನದ ಡಿಸೆಂಬರ್ 24 ಈ ವಾರ ರಿಲೀಸ್ ಆಗುತ್ತಿದೆ. ರಘು ಶೆಟ್ಟಿ ಅವರೇ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಬಳಿಕ ಸುಪ್ರಿತಾ ಸತ್ಯನಾರಾಯಣ್, ಅರ್ಜುನ್ ಯೋಗಿಶ್ ರಾಜ್ ಅಭಿನಯದ ಲಾಂಗ್ ಡ್ರೈವ್ ಸಿನಿಮಾ ಈ ಶುಕ್ರವಾರ ರಿಲೀಸ್ ಆಗುತ್ತಿದೆ. ರಾಜು ಜಿ. ಎಂಬುವರು ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ.
ಲೈಫು ಇಷ್ಟೇನೆ: ಇನ್ನು, ದೂದ್ ಪೇಡಾ ದಿಗಂತ್ ಅಭಿನಯದ ಲೈಫು ಇಷ್ಟೇನೆ ಸಿನಿಮಾ ರೀ ರಿಲೀಸ್ ಆಗುತ್ತಿದೆ. ಪವನ್ ಕುಮಾರ್ ನಿರ್ದೇಶನದ ದಿಗಂತ್ ಹಾಗು ಸಂಯುಕ್ತಾ ಹೊರನಾಡು ಅಭಿನಯದ ಈ ಚಿತ್ರ ದಿಗಂತ್ ಗೆ ದೊಡ್ಡ ಮಟ್ಟದ ಬ್ರೇಕ್ ನೀಡಿತ್ತು. ಇದರ ಜೊತೆಗೆ ಶೋಭ್ರಾಜ್, ಸಂಗೀತಾ ಅಭಿನಯದ ಒಂದಾನೊಂದು ಕಾಲದಲ್ಲಿ ಚಿತ್ರ ಕೂಡ ಪ್ರೇಕ್ಷಕರ ಮುಂದೆ ಬರುವ ಮೂಲಕ ವಾರ ಬರೋಬ್ಬರಿ 10 ಚಿತ್ರಗಳು ರಿಲೀಸ್ ಆಗುತ್ತಿವೆ.
ಒಟ್ಟಾರೆ ಒಂದೇ ದಿನ 10 ಚಿತ್ರಗಳು ಬಿಡುಗಡೆ ಆಗುವುದರಿಂದ ಸಹಜವಾಗಿ ಸಿನಿಮಾ ಪ್ರಿಯರು ಗೊಂದಲಕ್ಕೆ ಬೀಳುತ್ತಾರೆ. ಇದರ ಜೊತೆಗೆ ಚಿತ್ರಮಂದಿರಗಳು ಕೊರತೆ ಇರುವುದರಿಂದ ಥಿಯೇಟರ್ ಸಮಸ್ಯೆ ಕಾಡುತ್ತೆ. ಹೀಗೆ ಇರಬೇಕಾದ್ರೆ ನಿರ್ಮಾಪಕರು ಕೂಡ ಜಿದ್ದಿಗೆ ಬಿದ್ದವರಂತೆ ಒಂದೇ ದಿನ ತಮ್ಮ ಚಿತ್ರಗಳನ್ನ ಬಿಡುಗಡೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಪ್ರೇಕ್ಷಕರು ಯಾರ ಕೈ ಹಿಡಿಯುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂಓದಿ:ತೆಲುಗಿನ 'ವೇದ' ರಿಲೀಸ್: ಶಿವಣ್ಣನ ಮುಂದಿನ ಸಿನಿಮಾ ಯಾವುದು? ಭಕ್ತಿ ಪ್ರಧಾನ ಚಿತ್ರದತ್ತ ಹ್ಯಾಟ್ರಿಕ್ ಹೀರೋ ಚಿತ್ತ