ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ಈಗಿರುವ ಗಡಿಯ ಒಂದು ಕಿ. ಮೀ. ಆಚೆಗಿನ ಪ್ರದೇಶವನ್ನು ಕೂಡ ಬಿಬಿಎಂಪಿ ವ್ಯಾಪ್ತಿಗೆ ಸೇರಿಸುವ ಅಂಶ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡ ಬಿಬಿಎಂಪಿ ವಿಧೇಯಕ- 2020 ಸದನದಲ್ಲಿ ಅಂಗೀಕಾರ ಪಡೆದಿದೆ.
ಪಾಲಿಕೆ ಆಸುಪಾಸಿನ 111 ಗ್ರಾಮಗಳು, ಒಂದು ಪುರಸಭೆ ಹಾಗೂ ಏಳು ನಗರಸಭೆಗಳನ್ನು ತೆಕ್ಕೆಗೆ ಸೇರಿಸಿಕೊಂಡು ಬಿಬಿಎಂಪಿ 2007 ರಲ್ಲಿ ವಿಸ್ತರಿಸಿದ್ದ ವ್ಯಾಪ್ತಿ ಈಗ ಮತ್ತಷ್ಟು ಹಿಗ್ಗಲಿದೆ. ಈಗಿನ ಗಡಿಯ 1 ಕಿ.ಮೀ ವ್ಯಾಪ್ತಿಯ ಹಲವು ಗ್ರಾಮ ಪಂಚಾಯತ್‌ಗಳು, ನಗರಸಭೆ, ಪುರಸಭೆಗಳು ಪಾಲಿಕೆಗೆ ಸೇರ್ಪಡೆಯಾಗಲಿವೆ.
ಪಾಲಿಕೆಯಲ್ಲಿ ಈಗ ಇರುವಷ್ಟೇ ವ್ಯಾಪ್ತಿಯಲ್ಲಿ ವಾರ್ಡ್‌ಗಳ ಸಂಖ್ಯೆ ಮಾತ್ರ 243ಕ್ಕೆ ಹೆಚ್ಚಿಸಲಾಗುವುದು ಎಂದು ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್ ರಘು ಹೇಳಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಒಂದು ಕಿ.ಮೀ ಆಚೆಗಿನ ಪ್ರದೇಶಗಳ ಸೇರ್ಪಡೆ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಒಟ್ಟಿನಲ್ಲಿ ಪಾಲಿಕೆ ವ್ಯಾಪ್ತಿ ಹೆಚ್ಚಳದ ಜೊತೆಗೆ ಮೇಯರ್, ಉಪಮೇಯರ್ ಅಧಿಕಾರಾವಧಿ ಒಂದು ವರ್ಷದಿಂದ ಎರಡೂವರೇ ವರ್ಷಕ್ಕೆ ಏರಿಸುವ ಪ್ರಸ್ತಾವನೆಗೂ ಒಪ್ಪಿಗೆ ಸಿಕ್ಕಿದೆ. ಹನ್ನೆರಡು ಇದ್ದ ಸ್ಥಾಯಿಸಮಿತಿಗಳು ಇದೀಗ ಎಂಟಕ್ಕೆ ಇಳಿಕೆಯಾಗಿದೆ.
ವ್ಯಾಪ್ತಿ ಸೇರ್ಪಡೆ ವಿಳಂಬ ಸಾಧ್ಯತೆ : ಪಾಲಿಕೆ ವ್ಯಾಪ್ತಿಯಲ್ಲಿ ಹಿಗ್ಗಿಸುವ ಬಗ್ಗೆ ಬಿಬಿಎಂಪಿ ಮಸೂದೆಯಲ್ಲೇ ಉಲ್ಲೇಖಿಸಿದ್ರೆ ಸಾಲದು ಅದಕ್ಕಾಗಿ ಸೇರ್ಪಡೆಗೊಳ್ಳಲಿರುವ ಪ್ರದೇಶಗಳನ್ನು ಖಚಿತವಾಗಿ ಉಲ್ಲೇಖಿಸಿ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಬೇಕಾಗುತ್ತದೆ. ಈ ಬಗ್ಗೆ ರಾಜ್ಯಪತ್ರದಲ್ಲಿ ಕರಡು ಪಟ್ಟಿ ಪ್ರಕಟಿಸಿ ಸಾರ್ವಜನಿಕರಿಂದ ಸಲಹೆ ಅಥವಾ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕಾಗುತ್ತದೆ.
ಜನರ ಪ್ರತಿಕ್ರಿಯೆ ಆಧರಿಸಿ ಹೊಸ ಗ್ರಾಮಗಳ ಸೇರ್ಪಡೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಇದರ ಜೊತೆಗೆ ವಾರ್ಡ್‌ಗೆ ನಿಗದಿಪಡಿಸಿರುವ 35 ಸಾವಿರ ಜನಸಂಖ್ಯೆಯಲ್ಲೂ ಏರುಪೇರಾಗುವ ಸಾಧ್ಯತೆ ಇದೆ.