ನೆಲಮಂಗಲ : ಸಾರ್ವಜನಿಕ ಸ್ಥಳದಲ್ಲಿ ಯಾಕೆ ಸಿಗರೇಟ್ ಸೇದುತ್ತಿದ್ದೀರಾ? ಎಂದು ಪ್ರಶ್ನಿಸಿದ ಯುವಕನನ್ನು ಗಾಂಜಾ ವ್ಯಸನಿಗಳ ಗ್ಯಾಂಗ್ ಹೊಡೆದು ಕೊಂದ ಘಟನೆ ಪಟ್ಟಣದ ಜಯನಗರದಲ್ಲಿ ನಡೆದಿದೆ.
ಪ್ರಕರಣದ ವಿವರ:
ಅರುಣ್ (25) ಕೊಲೆಯಾದ ಯುವಕ. ಬುಧವಾರ ರಾತ್ರಿ 11 ಗಂಟೆ ಸಮಯದಲ್ಲಿ ಅರುಣ್ ತನ್ನ ಮನೆಗೆ ಬರುವ ಸಮಯದಲ್ಲಿ ಪಟ್ಟಣದ ಶ್ರೀರಂಗ ಬೇಕರಿಯ ಮೆಟ್ಟಿಲು ಮೇಲೆ ಕುಳಿತ ಸಲ್ಮಾನ್ (22), ಇಮ್ರಾನ್ (21), ಸುಝೈನ್ (24) ಸಿಗರೇಟ್ ಸೇದುತ್ತಿದ್ದರು. ತಮ್ಮ ಏರಿಯಾದಲ್ಲಿ ಮಧ್ಯರಾತ್ರಿ ಸಿಗರೇಟ್ ಸೇದುತ್ತಿದ್ದವರನ್ನು ನೋಡಿ ಕೋಪಗೊಂಡ ಅರುಣ್, ಇಲ್ಲೇಕೆ ಸಿಗರೇಟ್ ಸೇದುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾನೆ.
ಈ ವಿಚಾರವಾಗಿ ಯುವಕರು ಮತ್ತು ಅರುಣ್ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಘಟನೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಈ ವೇಳೆ ರೊಚ್ಚಿಗೆದ್ದ ಯುವಕರು ಅರುಣ್ನನ್ನು ಮನಬಂದಂತೆ ಥಳಿಸಿದ್ದಾರೆ. ಪರಿಣಾಮ, ತೀವ್ರವಾಗಿ ಗಾಯಗೊಂಡ ಅರುಣ್, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ಬಳಿಕ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ.
ನೆಲಮಂಗಲ ನಗರ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಈ ಘಟನೆ ನಡೆದಿದೆ. ಯುವಕರು ಜಗಳವಾಡುತ್ತಿದ್ದ ಧ್ವನಿ ಠಾಣಾ ಸಿಬ್ಬಂದಿಗೆ ಕೇಳಿಸಿದರೂ ನಿರ್ಲಕ್ಷ್ಯ ಮಾಡಿದ್ದಾರೆ ಎನ್ನಲಾಗ್ತಿದೆ.
ಈ ಘಟನೆ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಬೇಕರಿ ಸಮೀಪದ ಸಿಸಿ ಕ್ಯಾಮರಾ ದೃಶ್ಯದ ಆಧಾರದ ಮೇಲೆ ಆರೋಪಿಗಳ ಪತ್ತೆ ಮಾಡಿದ್ದಾರೆ. ಮಧ್ಯರಾತ್ರಿಯೇ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತ ಆರೋಪಿಗಳು ಬೆಂಗಳೂರಿನ ಬನಶಂಕರಿಯ ಯಾರಬ್ ನಗರದವರಾಗಿದ್ದು, ನೆಲಮಂಗಲದ ಸಂಬಂಧಿಕರ ಮನೆಗೆ ಬಂದಿದ್ದರೆಂಬ ಮಾಹಿತಿ ಲಭ್ಯವಾಗಿದೆ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ. ಡಿ ಚನ್ನಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.