ನೆಲಮಂಗಲ: ಇಲ್ಲಿನ ರಂಗನಾಥಸ್ವಾಮಿ ಉತ್ಸವಕ್ಕೆಂದು ಕುಟುಂಬದ ಜೊತೆ ಬಂದಿದ್ದ ಯುವಕನೋರ್ವ ಕೆರೆಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಶಿವಗಂಗೆ ಸಮೀಪದ ದೇವರಕೆರೆಯಲ್ಲಿ ಘಟನೆ ನಡೆದಿದೆ.
ದುರ್ಘಟನೆಯಲ್ಲಿ ತುಮಕೂರು ಜಿಲ್ಲೆಯ ತೆರದಗುಪ್ಪೆ ನಿವಾಸಿ ಕುಮಾರ್ (20) ಮೃತಪಟ್ಟಿದ್ದಾನೆ. ಕುಟುಂಬದ ಜೊತೆ ಗಂಗೆ ಪೂಜೆಗೆ ತೆರಳಿದ್ದ ವೇಳೆ ನಾಲ್ವರು ಯುವಕರು ಕೆರೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನುಳಿದ ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ದಳದವರು ಮೃತ ಯುವಕನ ಶವವನ್ನು ಕೆರೆಯಿಂದ ಮೇಲೆತ್ತಿದ್ದಾರೆ. ಈ ಸಂಬಂಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.