ದೊಡ್ಡಬಳ್ಳಾಪುರ : ಇಲ್ಲಿನ ಹೊಸಹಳ್ಳಿತಾಂಡ ಗ್ರಾಮದಲ್ಲಿ ಅಕ್ರಮ ಮದ್ಯಮಾರಾಟ ವ್ಯಾಪಕವಾಗಿದೆ. ಅಕ್ರಮ ಮದ್ಯ ಮಾರಾಟ ತಡೆಯುವಂತೆ ಗ್ರಾಮದ ಮಹಿಳೆಯರು ಒತ್ತಾಯಿಸಿದ್ದಾರೆ. ಈ ಗ್ರಾಮದಲ್ಲಿ ಲಂಬಾಣಿ ಸಮುದಾಯದ ಕುಟುಂಬಗಳು ವಾಸವಾಗಿವೆ. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಮಹಿಳೆಯರು ಮಾಡಿರುವ ಮನವಿಗೆ ಸ್ಪಂದಿಸಿರುವ ಪೊಲೀಸ್ ಇಲಾಖೆ ಗ್ರಾಮಸಭೆ ನಡೆಸಿ ಅಕ್ರಮ ಮದ್ಯ ಮಾರಾಟಗಾರರಿಗೆ ಎಚ್ಚರಿಕೆ ನೀಡಿದೆ.
ಗ್ರಾಮದಲ್ಲಿ ಸುಮಾರು 8ಕ್ಕೂ ಅಧಿಕ ಅಂಗಡಿಗಳಲ್ಲಿ ಮದ್ಯಮಾರಾಟ ಎಗ್ಗಿಲ್ಲದೆ ನಡೆದಿದೆ. ಇದರಿಂದಾಗಿ ಗ್ರಾಮದ ಯುವಕರು ಕುಡಿತದ ಚಟಕ್ಕೆ ದಾಸರಾಗುತ್ತಿದ್ದಾರೆ. ದುಡಿಮೆ ಹಣವನ್ನು ಮದ್ಯಪಾನಕ್ಕೆ ವ್ಯಯಿಸುತ್ತಿದ್ದಾರೆ. ಕುಡಿತದ ಚಟಕ್ಕೆ ಗ್ರಾಮದ ಹರೀಶ್ ನಾಯ್ಕ್ ಎಂಬ ಪ್ರತಿಭಾವಂತ ಯುವಕ ಪ್ರಾಣ ಕಳೆದುಕೊಂಡಿದ್ದಾನೆ. ಯುವಕ ಹರೀಶ್ ನಾಯ್ಕ್ ಸಾವಿನ ಬಳಿಕ ಎಚ್ಚೆತ್ತ ಗ್ರಾಮಸ್ಥರು ಮದ್ಯ ಮಾರಾಟಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ.
ಯುವಕರು ಮತ್ತು ಮಹಿಳೆಯರು ಒಟ್ಟಾಗಿ ಗ್ರಾಮದಲ್ಲಿನ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಹೊಸಹಳ್ಳಿ ಪೊಲೀಸರು ಗ್ರಾಮದಲ್ಲಿ ಸಭೆ ನಡೆಸಿದ್ದು, ಅಂಗಡಿ ಮಾಲೀಕರಿಗೆ ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಅಕ್ರಮ ಮದ್ಯ ಮಾರಾಟ ಮಾಡಿದ್ದು ಕಂಡುಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಓದಿ : ಕರ್ನಾಟಕ ಚುನಾವಣೆಗೆ ಬಿಜೆಪಿ ರಣತಂತ್ರ: ಮುಂದಿನ ಗುರಿ ತೆಲಂಗಾಣ, ಪಶ್ಚಿಮ ಬಂಗಾಳ ಎಂದ ಅಮಿತ್ ಶಾ